ಮನಾಮ: ವಿಶ್ವ ಭೂಪಟದಲ್ಲಿ ಪಾಸ್ತಾನ ಭಯೋತ್ಪಾದಕರ ತವರೂರು ಎಂದು ಬಿಂಬಿಸಲು ಹೊರಟಿರುವ ಭಾರತ, ತಾನು ಕೈಗೊಂಡಿರುವ ವಿದೇಶ ಪ್ರವಾಸದಲ್ಲೆಲ್ಲ ಉಗ್ರರ ಕುರಿತು ಎಚ್ಚರಿಕೆ ನೀಡುತ್ತಿದೆ.
ಅದೇ ರೀತಿ ಮೂರು ದಿನಗಳ ಕಾಲ ಬಹ್ರೇನ್ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್, ಅಲ್ಲಿಯ ಒಳಾಡಿತ ಸಚಿವ ರಶೀದ್ ಬಿನ್ ಅಬ್ದುಲ್ಲಾ ಅಲ್ ಖಲಿಫಾ ಅವರೊಂದಿಗೆ ನಡೆಸಿದ ದ್ವಿಪಕ್ಷೀಯ ಮಾತುಕತೆ ವೇಳೆ ಪಾಕಿಸ್ತಾನ ನಡೆಸುತ್ತಿರುವ ಉಗ್ರ ಪೋಷಣೆ ಕುರಿತು ಬೆಳಕು ಚೆಲ್ಲಿದರು. ಪಾಕ್ ನೆಲದಿಂದ ರಫ್ತಾಗುತ್ತಿರುವ ಭಯೋತ್ಪಾದನೆ ತೀವ್ರ ಕಳವಳಕಾರಿಯಾಗಿದೆ. ಜಮ್ಮು ಕಾಶ್ಮೀರದ ಉದ್ವಿಗ್ನತೆಗೆ ಗಡಿಯಾಚೆಗಿನ ಪ್ರಚೋದನೆಯೇ ಕಾರಣವಾಗಿದೆ. ಹತ್ ಹಿಜ್ಬುಲ್ ಉಗ್ರ ಬುರ್ಹಾನ್ ವಾನಿಯನ್ನು ಹುತಾತ್ಮನಂತೆ ಬಿಂಬಿಸಿ, ಭಾರತದಲ್ಲಿ ಪಾಕ್ ಭಯೋತ್ಪಾದನೆಯನ್ನು ಸೃಷ್ಟಿಸುತ್ತಿದೆ ಎಂದು ತಿಳಿಸಿದ್ದಾರೆ.
ಮುಂದುವರಿದು, ಭಯೋತ್ಪಾದಕರು ಹಾಗೂ ಭಯೋತ್ಪಾದನೆಗೆ ಬೆಂಬಲ ನೀಡುವವರು ಪಾಕಿಸ್ತಾನದಲ್ಲಿ ಸ್ವಚ್ಛಂದವಾಗಿ ತಿರುಗುತ್ತಿದ್ದಾರೆ. ಜಮ್ಮು-ಕಾಶ್ಮೀರ ಜನತೆಯ ಕುಂದು ಕೊರತೆಗಳ ನಿವಾರಣೆಗಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಲ್ಲಿಯ ಪರಿಸ್ಥಿತಿ ತಿಳಿಗೊಳಿಸಲು ಕೈಗೊಳ್ಳಬೇಕಾದ ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂದು ರಾಜನಾಥ್ ಸಿಂಗ್ ಹೇಳಿದರು. ನಂತರ ಗೃಹ ಸಚಿವರು ಬಹ್ರೇನ್ ಯುವರಾಜ ಸಲ್ಮಾನ್ ಬಿನ್ ಹಮದ್ ಅಲ್ ಖಲಿಫಾ ಅವರನ್ನು ಗುದೈಬಿಯಾ ಅರಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ