ಸುಮಾರು 1 ತಿಂಗಳ ಅನಿಶ್ಚಿತತೆಯ ಬಳಿಕ ಕೊನೆಗೂ ಜೋಧ್ಪುರದ ನರೇಶ್ ತೇವಾನಿ ಇಂದು ಪಾಕ್ ವಧು ಪ್ರಿಯಾ ಬಚ್ಚಾನಿಯವರನ್ನು ಕೈ ಹಿಡಿಯುತ್ತಿದ್ದಾರೆ.
ಅವರಿಬ್ಬರ ಮದುವೆಗೆ ತಡೆಯಾಗಿದ್ದ ಹಲವಾರು ವಿಘ್ನಗಳು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಮಧ್ಯಸ್ಥಿಕೆಯಲ್ಲಿ ಬಗೆಹರಿದಿದ್ದು, ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಪ್ರಿಯಾಗೆ ವೀಸಾ ನೀಡಿದ್ದಾರೆ.
ರಾಜಸ್ಥಾನದ ನರೇಶ್‌ಗೆ ಕರಾಚಿಯ ಪ್ರಿಯಾ ಜತೆ ಕಳೆದ ಮೂರು ವರ್ಷಗಳ ಹಿಂದೆ ವಿವಾಹ ನಿಶ್ಚಯವಾಗಿತ್ತು. ನವೆಂಬರ್ 7(ಇಂದು) ಅವರ ಮದುವೆ ನಿಗದಿಯಾಗಿತ್ತು.
ಆದರೆ ಭಾರತದ ರಾಯಭಾರಿ ವಧುವಿಗೆ ವೀಸಾ ನೀಡಲು ವಿಳಂಬ ಮಾಡುತ್ತಿದ್ದುದು ಮದುವೆಗೆ ವಿಘ್ನವಾಗಿ ತಲೆದೋರಿತ್ತು. ಮದುವೆಯ ದಿನ ಹತ್ತಿರ ಬರುತ್ತಿದ್ದಂತೆ ಎರಡು ಕಡೆಯವರ ಆತಂಕ ಜಾಸ್ತಿಯಾಗುತ್ತ ಸಾಗಿತ್ತು. ತಮ್ಮ ಸಮಸ್ಯೆಗೆ ಪರಿಹಾರ ನೀಡುವಂತೆ ವರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದ. ವಧು ಸೇರಿದಂತೆ 35 ಜನರಿಗೆ ವೀಸಾ ಪಡೆಯಲು ಸಹಾಯ ಮಾಡಿ ಎಂದು ವಿನಂತಿಸಿದ್ದ. ಆತನ ಮನವಿ ಸ್ಪಂದಿಸಿದ ಸುಷ್ಮಾ ವೀಸಾ ವ್ಯವಸ್ಥೆಯಾಗುವಂತೆ ಮಾಡಿದ್ದಾರೆ.
ಸಚಿವೆಯ ತ್ವರಿತ ಸ್ಪಂದನೆಗೆ ಕೃತಜ್ಞತೆಗಳು, ಎಲ್ಲ 35 ಜನ ಭಾರತಕ್ಕೆ ಬಂದಿಳಿದಿದ್ದಾರೆ ಎಂದು ವರ ನರೇಶ್ ಹೇಳಿದ್ದಾನೆ.
ಪ್ರಿಯಾ ಮತ್ತು ಆಕೆಯ ಕುಟುಂಬ ಭಾನುವಾರ ಜೋಧ್ಪುರಕ್ಕೆ ಬಂದಿಳಿದಿದ್ದು, ಎಲ್ಲವೂ ಯೋಜಿತ ರೀತಿಯಲ್ಲಿಯೇ ಆಗಿದ್ದಕ್ಕೆ ತುಂಬ ಸಂತೋಷವಾಗುತ್ತಿದೆ. ನಾವು ಮದುವೆ ಉತ್ಸವದಲ್ಲಿ ಮುಳುಗಿದ್ದೇವೆ ಎನ್ನುತ್ತಾಳೆ ಭಾರತದ ಸೊಸೆ ಪೂಜಾ ನಗುತ್ತ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ