ನವದೆಹಲಿ: ಪ್ರಧಾನ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ದೆಹಲಿಯಲ್ಲಿ ನೀತಿ ಆಯೋಗದ ಸಭೆ ನಡೆಯಲಿದ್ದು, ಕರ್ನಾಟಕ ಸೇರಿದಂತೆ ಏಳು ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯನ್ನು ಬಹಿಷ್ಕರಿಸುತ್ತಿದ್ದಾರೆ.
ಕೇಂದ್ರ ಬಜೆಟ್ ನಲ್ಲಿ ವಿಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಅನುದಾನ ಕೊಟ್ಟಿಲ್ಲ ಎನ್ನುವುದು ಈ ರಾಜ್ಯಗಳ ಮುಖ್ಯಮಂತ್ರಿಗಳ ಅಸಮಾಧಾನವಾಗಿದೆ. ಈ ಕಾರಣಕ್ಕೆ ಕರ್ನಾಟಕ, ಕೇರಳ, ತೆಲಂಗಾಣ, ತಮಿಳುನಾಡು, ದೆಹಲಿ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳು ಇಂದಿನ ಸಭೆಗೆ ಗೈರಾಗಲಿದ್ದಾರೆ. ಆದರೆ ಇಂಡಿಯಾ ಒಕ್ಕೂಟವನ್ನು ಧಿಕ್ಕರಿಸಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಭೆಗೆ ಹಾಜರಾಗುತ್ತಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ 9 ನೇ ಆಡಳಿತ ಸಮಿತಿ ಸಭೆ ನಡೆಯುತ್ತಿದೆ. ಈ ಸಭೆಯು ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಯೋಗದಿಂದ ಆಡಳಿತ ಸುಧಾರಣೆ ಮಾಡುವ ಬಗ್ಗೆ ಸಲಹೆಗಳನ್ನು ನೀಡುವುದು ಈ ನೀತಿ ಆಯೋಗದ ಸಭೆಯ ಉದ್ದೇಶ. ಈ ಸಭೆಯಲ್ಲಿ ಈ ಬಾರಿ ಕುಡಿಯುವ ನೀರು, ವಿದ್ಯುತ್, ಆರೋಗ್ಯ, ಶಿಕ್ಷಣದ ಬಗ್ಗೆ ವಿಶೇಷವಾಗಿ ಚರ್ಚೆಯಾಗಲಿದೆ ಎನ್ನಲಾಗಿದೆ.
ಆರ್ಥಿಕಾಭಿವೃದ್ಧಿ ಸಮಾಜಿಕ ಪ್ರಗತಿ ಮತ್ತು ಉತ್ತಮ ಆಡಳಿತ ಸೇರಿದಂತೆ ಒಟ್ಟು 10 ವಲಯವಾರು ವಿಷಯಾಧಾರಿತ ದೃಷ್ಟಿಕೋನಗಳನ್ನು ಈ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎನ್ನಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ದೇಶದ ಪ್ರಗತಿಗೆ ಯೋಜನೆ ರೂಪಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ.