ವಿಶಾಕಪಟ್ಟಣಂನಲ್ಲಿ ಸೇವೆ ಸಲ್ಲಿಸುತ್ತಿರುವ ನೌಕಾಸೇನೆಯ ಹಿರಿಯ ಅಧಿಕಾರಿ ಅರವಿಂದ್ ಶರ್ಮಾ ಅವರ 17 ವರ್ಷದ ಪುತ್ರಿ ಹೈದರಾಬಾದ್‌ನ ವಿಮಾನ ನಿಲ್ದಾಣದಿಂದ ನಾಪತ್ತೆಯಾಗಿದ್ದಾಳೆ.
ಶರ್ಮಾ ಅವರ ಪುತ್ರಿ ಖೈರವಿ ಶರ್ಮಾ ಪುಣೆಯಲ್ಲಿ ಅಧ್ಯಯನ ನಡೆಸುತ್ತಿದ್ದು ಇತ್ತೀಚಿಗೆ 11 ನೇ ತರಗತಿಯನ್ನು ಮುಗಿಸಿದ್ದಳು. ಪುಣೆಯಿಂದ ವಿಶಾಖಪಟ್ಟಣಂಗೆ ಮರಳುತ್ತಿದ್ದ ಆಕೆ ಜೂನ್ 14 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಳು. ಅಂದಿನಿಂದ ಆಕೆ ಪತ್ತೆ ಇಲ್ಲ ಎಂದು ಆರ್‌ಜಿಐಎ ಪೊಲೀಸ್ ಠಾಣಾ ಇನ್ಸಪೆಕ್ಟರ್ ಎಮ್. ಮಹೇಶ್ ತಿಳಿಸಿದ್ದಾರೆ.
ಮಗಳು ನಾಪತ್ತೆಯಾಗಿದ್ದಾಳೆ ಎಂದು ತಂದೆ ಅರವಿಂದ ಶರ್ಮಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಆಕೆಯನ್ನು ಪತ್ತೆ ಹಚ್ಚಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಬಾಲಕಿ ಖೈರವಿ ಮೊಬೈಲ್ ಫೋನ್ ಸ್ವಿಚ್ಡ ಆಪ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.