ತಮ್ಮ ಹಿರಿಯ ಸಹೋದರ, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರೇ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಎಂದು ಶಿವಪಾಲ್ ಸಿಂಗ್ ಮನವಿ ಮಾಡಿಕೊಂಡಿದ್ದು ಯಾದವೀ ಪರಿವಾರದಲ್ಲಿ ನಡೆಯುತ್ತಿರುವ ಕಲಹಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಅಣ್ಣನ ಮಗ ಅಖಿಲೇಶ್, ತಮ್ಮನ್ನು ಸಚಿವ ಸ್ಥಾನದಿಂದ ಕಿತ್ತೆಸೆದ ಬಳಿಕ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಶಿವಪಾಲ್, ಮುಲಾಯಂ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದಾರೆ,
ಇಂದು ಲಕ್ನೋನಲ್ಲಿ ನಡೆದ ಪಕ್ಷದ ವರಿಷ್ಠರ ಸಭೆಯಲ್ಲಿ ಶಿವಪಾಲ್ ಸಿಂಗ್ ಮತ್ತು ಅಖಿಲೇಶ್ ಇಬ್ಬರು ಭಾವುಕರಾಗಿ ತಮ್ಮ ತಮ್ಮ ಅಳಲನ್ನು ಮುಲಾಯಂ ಮುಂದಿಟ್ಟರು.
ಗಂಗಾಜಲ ಮುಟ್ಟಿ ಪ್ರಮಾಣ ಮಾಡುತ್ತೇನೆ ಅಖಿಲೇಶ್ ಯಾದವ್ ಹೊಸ ಪಕ್ಷ ಕಟ್ಟಲು, ವಿರೋಧಪಕ್ಷದವರ ಜತೆ ಮೈತ್ರಿ ಮಾಡಿಕೊಳ್ಳಲು ತಯಾರಾಗಿದ್ದರು ಎಂದು ಗುಡುಗಿರುವ ಶಿವಪಾಲ್, ಪಕ್ಷವನ್ನು ಉಳಿಸಿಕೊಳ್ಳಲು ಯಾವ ತ್ಯಾಗಕ್ಕೂ ಸಿದ್ಧ ಎಂದು ಶಿವಪಾಲ್ ಹೇಳಿದ್ದಾರೆ.
ಪಕ್ಷ ಕಟ್ಟುವಾಗ ನಾನು ಸಹೋದರನ ಜತೆಗಿದ್ದೆ. ತುರ್ತು ಪರಿಸ್ಥಿತಿಯಲ್ಲಿ ಮುಲಾಯಂ ಜೈಲಿಗೆ ಹೋದಾಗ ನಾನು ಪಕ್ಷವನ್ನು ನಿಭಾಯಿಸಿದ್ದೇನೆ. ಆದರೆ ನನ್ನಿಂದ ಅಧಿಕಾರವನ್ನು ಕಸಿಯಲಾಯ್ತು. ನನ್ನದೇನು ತಪ್ಪಿತ್ತು, ಇದೆಲ್ಲ ನನಗೆ ದುಃಖ ತಂದಿದೆ ಎಂದು ಮುಲಾಯಂ ಸಹೋದರ ಶಿವಪಾಲ್ ಸಿಂಗ್ ತಮ್ಮ ನೋವನ್ನು ಹೊರಹಾಕಿದ್ದಾರೆ.
ಇತ್ತ ತನ್ನ ತಂದೆಯನ್ನು ಬಿಟ್ಟುಕೊಡದ ಪರಿಸ್ಥಿತಿ ಅಖಿಲೇಶ್‌ಗೆ ಸೃಷ್ಟಿಯಾಗಿದೆ. ನಾನು ತಂದೆಯ ಪರವಾಗಿಯೇ ಇರುತ್ತೇನೆ. 25 ವರ್ಷಗಳನ್ನು ಪೂರೈಸಿರುವ ಪಕ್ಷವನ್ನು ಒಡೆದು ಈಗ ಹೊಸ ಪಕ್ಷವನ್ನು ಏಕೆ ಕಟ್ಟಲಿ. ಹೊಸ ಪಕ್ಷವನ್ನು ಕಟ್ಟುವ ಯೋಚನೆಯನ್ನು ಮಾಡಿಯೇ ಇಲ್ಲ. ಪಕ್ಷದಲ್ಲಿ ಕೆಲವರು ಷಡ್ಯಂತ್ರ ಮಾಡಿದ್ದಾರೆ. ಮುಲಾಯಂ ಕೇಳಿದರೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಎಂದೋ ರಾಜೀನಾಮೆ ನೀಡುತ್ತಿದ್ದೆ. ಹೊಸ ಪಕ್ಷ ಕಟ್ಟುವುದು ವದಂತಿ. ಮುಲಾಯಂ ನನ್ನ ತಂದೆ ಅಷ್ಟೇ ಅಲ್ಲ ಗುರು ಸಹ ಭಾವುಕರಾಗಿ ಹೇಳಿದ್ದಾರೆ ಅವರು.
ಆದರೆ ಮುಲಾಯಂ ಸಿಂಗ್ ಯಾದವ್ ತಮ್ಮ ಮಗನನ್ನು ಬದಿಗಿಟ್ಟು ಪಕ್ಷವನ್ನು ಕಟ್ಟುವಾಗ ತಮಗೆ ಹೆಗಲಾಗಿದ್ದ ಸಹೋದರ ಶಿವಪಾಲ್ ಸಿಂಗ್ ಮತ್ತು ಪಕ್ಷದ ಮತ್ತೊಬ್ಬ ವರಿಷ್ಠ ಅಮರ್ ಸಿಂಗ್ ಪರವಾಗಿ ನಿಂತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ