Select Your Language

Notifications

webdunia
webdunia
webdunia
webdunia

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ಗೆ ಮೋದಿ ಚಾಲನೆ

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ಗೆ ಮೋದಿ ಚಾಲನೆ
ಹೊಸದಿಲ್ಲಿ , ಮಂಗಳವಾರ, 28 ಸೆಪ್ಟಂಬರ್ 2021 (09:28 IST)
ಹೊಸದಿಲ್ಲಿ: ದೇಶದ ಪ್ರತಿಯೊಬ್ಬ ನಾಗರಿಕನಿಗೂ ವಿಶಿಷ್ಟ ಡಿಜಿಟಲ್ ಆರೋಗ್ಯ ಸಂಖ್ಯೆ ಒದಗಿಸುವಂಥ “ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್’ಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದ್ದಾರೆ.

ಈ ಯೋಜನೆಯು ದೇಶದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಲಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ವೀಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, “ಡಿಜಿಟಲ್ ಮೂಲಸೌಕರ್ಯವು ಈಗ ಭಾರತೀಯ ಜನಸಾಮಾನ್ಯನಿಗೆ ಪಡಿತರದಿಂದ ಆಡಳಿತದವರೆಗೆ ಎಲ್ಲವನ್ನೂ ಅತ್ಯಂತ ತ್ವರಿತ ಹಾಗೂ ಪಾರದರ್ಶಕವಾಗಿ ಒದಗಿಸುತ್ತಿದೆ. ಆಡಳಿತಾತ್ಮಕ ಸುಧಾರಣೆಯಲ್ಲಿ ಹಿಂದೆಂದೂ ಕಂಡಿರದಂತೆ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದೆ. ಆರೋಗ್ಯ ಸೇವೆಗಳನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಈ ಆಯುಷ್ಮಾನ್ ಭಾರತ್ ಡಿಜಿಟಲ್ ಯೋಜನೆಯು ಮಹತ್ವದ ಮೈಲುಗಲ್ಲು’ ಎಂದು ಹೇಳಿದ್ದಾರೆ.
ಈ ಯೋಜನೆಯಿಂದಾಗಿ ದೇಶದ ಯಾವುದೇ ಮೂಲೆಯಲ್ಲಿರುವ ವೈದ್ಯನಿಗೂ ತನ್ನ ರೋಗಿಯ ಆರೋಗ್ಯದ ಸಂಪೂರ್ಣ ವಿವರವನ್ನು ಪಡೆಯಲು ಸಾಧ್ಯವಾಗುತ್ತದೆ. ಇದು ಬಡ ಮತ್ತು ಮಧ್ಯಮವರ್ಗದವರಿಗೆ ಅತಿ ಹೆಚ್ಚು ಪ್ರಯೋಜನಕಾರಿ ಎಂದೂ ಮೋದಿ ಹೇಳಿದ್ದಾರೆ.
2020ರ ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದ ವೇಳೆ ಪ್ರಧಾನಿ ಮೋದಿ ಅವರು ಈ ಯೋಜನೆಯನ್ನು ಘೋಷಿಸಿದ್ದರು. ತದನಂತರ 6 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿತ್ತು. ಸೋಮವಾರದಿಂದ ಇದು ದೇಶಾದ್ಯಂತ ಅನುಷ್ಠಾನಗೊಂಡಿದೆ. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಗೆ 3 ವರ್ಷ ತುಂಬು ತ್ತಲೇ ಈ ಹೊಸ ಯೋಜನೆ ಜಾರಿ ಮಾಡಲಾಗಿದೆ.
ಆರೋಗ್ಯ-ಆತಿಥ್ಯ
ಸೋಮವಾರ ವಿಶ್ವ ಪ್ರವಾಸಿ ದಿನವೂ ಆಗಿದ್ದ ಹಿನ್ನೆಲೆಯಲ್ಲಿ ಆ ಕುರಿತೂ ಪ್ರಸ್ತಾಪಿಸಿದ ಮೋದಿ, “ಆರೋಗ್ಯ ಮೂಲಸೌಕರ್ಯವನ್ನು ಬಲಿಷ್ಠಗೊಳಿಸುವುದರಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೂ ಉತ್ತೇಜನ ಸಿಗುತ್ತದೆ. ಗೋವಾ, ಹಿಮಾಚಲ ಪ್ರದೇಶದಂಥ ಪ್ರವಾಸಿ ತಾಣಗಳಲ್ಲಿ ಬಹುತೇಕ ಎಲ್ಲ ವಯಸ್ಕರೂ ಕೊರೊನಾ ಲಸಿಕೆಯ ಕನಿಷ್ಠ 1 ಡೋಸ್ ಪಡೆದಿದ್ದಾರೆ. ಹೀಗಾಗಿ ಅಂಥ ಪ್ರದೇಶಗಳಿಗೆ ತೆರಳಲು ಪ್ರವಾಸಿಗರು ಇಷ್ಟಪಡುತ್ತಾರೆ. ಸುರಕ್ಷತೆಯ ಭಾವ ಅವರಲ್ಲಿ ಮೂಡುತ್ತದೆ’ ಎಂದು ಹೇಳಿದ್ದಾರೆ.
ಆರೋಗ್ಯಸೇತು, ಕೊವಿನ್, ಪ್ರಮಾಣಪತ್ರಕ್ಕೆ ಮೆಚ್ಚುಗೆ
ಭಾರತದಲ್ಲಿ ಸುಮಾರು 130 ಕೋಟಿ ಆಧಾರ್ ಬಳಕೆದಾರರು, 118 ಕೋಟಿ ಮೊಬೈಲ್ ಚಂದಾದಾರರು, 80 ಕೋಟಿ ಇಂಟರ್ನೆಟ್ ಬಳಕೆದಾರರು ಮತ್ತು 43 ಕೋಟಿ ಜನಧನ ಬ್ಯಾಂಕ್ ಖಾತೆದಾರರು ಇದ್ದಾರೆ. ಇಂಥದ್ದೊಂದು ಪರಸ್ಪರ ಸಂಪರ್ಕಿತ ಮೂಲಸೌಕರ್ಯವನ್ನು ಜಗತ್ತಿನ ಯಾವ ಮೂಲೆಯಲ್ಲೂ ಕಾಣಲು ಸಾಧ್ಯವಿಲ್ಲ. ಈಗ ಭಾರತದ ಜನರು ಡಿಜಿಟಲ್ ಆರೋಗ್ಯ ಗುರುತಿನ ಸಂಖ್ಯೆಯನ್ನೂ ಪಡೆಯಲಿದ್ದಾರೆ ಎಂದೂ ಮೋದಿ ಹೇಳಿದ್ದಾರೆ. ಇದೇ ವೇಳೆ, ತಂತ್ರಜ್ಞಾನದ ಮಹತ್ವದ ಕುರಿತು ಮಾತನಾಡಿದ ಪ್ರಧಾನಿ, “ಆರೋಗ್ಯಸೇತು ಆಯಪ್ ಕೊರೊನಾ ಸೋಂಕು ಹರಡುವಿಕೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈಗಾಗಲೇ ಭಾರತವು 90 ಕೋಟಿ ಡೋಸ್ ಲಸಿಕೆ ವಿತರಿಸಿದೆ. ಇದರಲ್ಲಿ ಕೊವಿನ್ ಅಪ್ಲಿಕೇಶನ್ ಮತ್ತು ಅದರ ಪೋರ್ಟಲ್ನ ಪಾತ್ರ ದೊಡ್ಡದಿದೆ. ನೋಂದಣಿಯಿಂದ ಪ್ರಮಾಣಪತ್ರದವರೆಗೆ ಇಷ್ಟೊಂದು ಅದ್ಭುತವಾದ ವ್ಯವಸ್ಥೆ ಎಲ್ಲಿಯೂ ಇಲ್ಲ’ ಎಂದೂ ಹೇಳಿದ್ದಾರೆ. ಕಳೆದ ವಾರವಷ್ಟೇ ಯುಕೆ ಸರಕಾರವು ಭಾರತದ ಲಸಿಕೆ ಪ್ರಮಾಣಪತ್ರದ ಬಗ್ಗೆ ತಕರಾರು ಎತ್ತಿರುವ ಹಿನ್ನೆಲೆಯಲ್ಲಿ ಮೋದಿ ಅವರ ಈ ಮಾತುಗಳು ಮಹತ್ವ ಪಡೆದಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ 86.89 ಕೋಟಿ ಜನರಿಗೆ ಕೊರೊನಾವೈರಸ್ ಲಸಿಕೆ ವಿತರಣೆ