ಪ್ರಧಾನಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟ ಪುನಾರಚನೆ ಮಾಡಲಿದ್ದು, ಆರೋಗ್ಯ ಸಚಿವ ಜೆಪಿ ನಡ್ಡಾ, ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಗಿರಿರಾಜ್ ಸಿಂಗ್ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಆಸ್ಸಾಂ ರಾಜ್ಯದ ವಿಧಾನಸಭೆ ಚುನಾವಣೆ ಫಲಿತಾಂಶ ಕೂಡಾ ಸಂಪುಟ ಪುನಾರಚನೆಗೆ ಪ್ರೇರಣೆಯಾಗಿದೆ ಎಂದು ಅನಾಮಧೇಯ ನಾಯಕರು ತಿಳಿಸಿದ್ದಾರೆ.
ಆಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಕೇರಳ ಮತ್ತು ಪುದುಚೇರಿ ವಿಧಾನಸಭೆಗಳ ಚುನಾವಣೆ ಫಲಿತಾಂಶ ಗುರುವಾರದಂದು ಪ್ರಕಟವಾಗಲಿದೆ. ಸಚಿವರಾದ ನಡ್ಡಾ, ಜಾವ್ಡೇಕರ್ ಮತ್ತು ಗಿರಿರಾಜ್ ಸಿಂಗ್ ಅವರನ್ನು ಪಕ್ಷದ ಸಂಘಟನೆಗಾಗಿ ಬಳಸಿಕೊಳ್ಳಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಒಂದು ವೇಳೆ, ಚುನಾವಣೋತ್ತರ ಸಮೀಕ್ಷೆಯಂತೆ ಆಸ್ಸಾಂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಕೇಂದ್ರ ಕ್ರೀಡಾ ಸಚಿವ ಸರ್ಬಾನಂದ್ ಸೋನೋವಾಲ್ ಮುಖ್ಯಮಂತ್ರಿಯಾಗಲಿದ್ದಾರೆ. ಅವರ ಖಾಲಿ ಸ್ಛಾನವನ್ನು ಮತ್ತೆ ತುಂಬಬೇಕಾಗುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ ಎರಡು ವರ್ಷಗಳ ಅವಧಿಯನ್ನು ಮುಂದಿನ ವಾರ ಪೂರ್ಣಗೊಳಿಸಲಿದ್ದು, ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಒತ್ತಡವನ್ನು ಎದುರಿಸುತ್ತಿದೆ.
ವರದಿಗಳ ಪ್ರಕಾರ ಕೇಂದ್ರ ಆರೋಗ್ಯ ಸಚಿವ ನಡ್ಡಾ ಕಾರ್ಯನಿರ್ವಹಣೆ ಬಗ್ಗೆ ಪ್ರಧಾನಿ ಕಚೇರಿ ಅಸಂತುಷ್ಟವಾಗಿದ್ದು, ಸಚಿವ ಜಾವ್ಡೇಕರ್ ಕೂಡಾ ಕಾರ್ಯನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ ಎನ್ನಲಾಗಿದೆ.
ವೆಬ್‌ದುನಿಯಾ
ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.