Publish Date: Tue, 27 Sep 2016 (15:50 IST)
Updated Date: Tue, 27 Sep 2016 (15:53 IST)
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನ ಕಲಾವಿದರು ಕೂಡಲೇ ತಮ್ಮ ದೇಶಕ್ಕೆ ತೆರಳಬೇಕು ಎನ್ನುವ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಬಹಿರಂಗ ಘೋಷಣೆಯಿಂದಾಗಿ ಎಚ್ಚೆತ್ತುಕೊಂಡ ಪಾಕ್ ನಟ ಫವಾದ್ ಖಾನ್ ರಹಸ್ಯವಾಗಿ ಪಾಕಿಸ್ತಾನಕ್ಕೆ ತೆರಳಿರುವುದು ಬಹಿರಂಗವಾಗಿದೆ.
ಪಾಕಿಸ್ತಾನದ ಕಲಾವಿದರಲ್ಲಿ ಫವಾದ್ ಖಾನ್ ಪ್ರಮುಖರಾಗಿದ್ದು, ಎಂಎನ್‌ಎಸ್ ಪಕ್ಷದ ಟಾರ್ಗೆಟ್ ಆಗಿದ್ದರು ಎಂದು ಹೇಳಲಾಗುತ್ತಿದೆ. ಪಾಕ್ ಕಲಾವಿದರ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಹಲ್ಲೆ ಮಾಡುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ಮಾಹಿತಿ ರವಾನಿಸಿದ್ದವು.
ಫವಾದ್ ಖಾನ್ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದರಿಂದ ಅವರ ಅಗತ್ಯವಿರಲಿಲ್ಲ. ಅವರ ಪತ್ನಿ ಎರಡನೇ ಮಗುವಿಗೆ ಜನ್ಮ ನೀಡಲಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಮರಳಿದ್ದಾರೆ ಎಂದು ಕರಣ್ ಜೋಹರ್ ಕಚೇರಿ ಮಾಹಿತಿ ನೀಡಿದೆ.
ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ನಿರ್ದೇಶನದ ಏ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ಫವಾದ್ ಖಾನ್ ನಟಿಸಿದ್ದು, ಚಿತ್ರವನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಎಂಎನ್‌ಎಸ್ ಬೆದರಿಕೆಯೊಡ್ಡಿದೆ.
ಉತ್ತರ ಕಾಶ್ಮಿರದ ಉರಿ ಸೇನಾ ಕೇಂದ್ರದ ಮೇಲೆ ಉಗ್ರರು ದಾಳಿ ನಡೆಸಿ 18 ಸೈನಿಕರ ಹತ್ಯೆ ಮಾಡಿರುವುದನ್ನು ವಿರೋಧಿಸಿ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಪಾಕ್ ಕಲಾವಿದರು 48 ಗಂಟೆಯೊಳಗೆ ಭಾರತ ತೊರೆಯಬೇಕು. ಇಲ್ಲವಾದಲ್ಲಿ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ