ಚೆನ್ನೈ: ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಬಳಿಕ ಇದೀಗ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಹೆಚ್ಚು ಮಕ್ಕಳನ್ನು ಪಡೆಯುವಂತೆ ಸಲಹೆ ನೀಡಿ ಸುದ್ದಿಯಾಗಿದ್ದಾರೆ.
ಇತ್ತೀಚೆಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ದಕ್ಷಿಣ ಭಾರತದಲ್ಲಿ ವೃದ್ಧರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಹೀಗಾಗಿ ಮುಂದೆ ಹೆಚ್ಚು ಮಕ್ಕಳನ್ನು ಪಡೆಯುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದ್ದರು. ಅದರ ಬೆನ್ನಲ್ಲೇ ಈಗ ಎಂಕೆ ಸ್ಟಾಲಿನ್ ಕೂಡಾ ಇಂತಹದ್ದೇ ಹೇಳಿಕೆ ನೀಡಿದ್ದಾರೆ.
ಚೆನ್ನೈನಲ್ಲಿ ಹಿಂದೂ ಧಾರ್ಮಿಕ ದತ್ತಿ ಮಂಡಳಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗಿಯಾದ ಅವರು ನವದಂಪತಿಗಳು 16 ಮಕ್ಕಳನ್ನು ಪಡೆಯಬೇಕು ಎಂದಿದ್ದಾರೆ. ಹಿಂದೆಲ್ಲಾ ಹಿರಿಯರು 16 ಆಸ್ತಿ ಸಂಪಾದಿಸಲು ಹೇಳುತ್ತಿದ್ದರು. ಆಗ ಈಗ ನವದಂಪತಿಗಳು 16 ಮಕ್ಕಳನ್ನು ಪಡೆಯಬೇಕು ಎಂದು ಆಶೀರ್ವದಿಸುವ ಕಾಲ ಬಂದಿದೆ ಎಂದಿದ್ದಾರೆ.
ಎಂಕೆ ಸ್ಟಾಲಿನ್ ಈ ಹೇಳಿಕೆ ಈಗ ಭಾರೀ ಚರ್ಚೆಗೆ ಗುರಿಯಾಗಿದೆ. ಒಂದೆಡೆ ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರವೇ ಎರಡು ಮಕ್ಕಳ ನಿಯಮ ಹೇಳುತ್ತಿದ್ದರೆ ಇತ್ತ ಸ್ಟಾಲಿನ್ 16 ಮಕ್ಕಳನ್ನು ಪಡೆಯಲು ಸಲಹೆ ನೀಡುತ್ತಿದ್ದಾರಲ್ಲಾ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.