ಬೆಂಗಳೂರು: ಲಾಕ್ ಡೌನ್ ನಿಂದಾಗಿ ಶ್ರೀಮಂತ ವರ್ಗದವರು ಸ್ವಲ್ಪ ಮಟ್ಟಿಗೆ ಹೊಡೆತ ಅನುಭವಿಸುತ್ತಾರೆ. ಆದರೆ ಅವರ ಜೀವನೋಪಾಯಕ್ಕೆ ತೊಂದರೆಯಾಗುವುದಿಲ್ಲ. ಬಡ ವರ್ಗದವರಿಗೆ ಸರ್ಕಾರ ನೆರವಿನ ಭರವಸೆ ನೀಡಿದೆ. ಆದರೆ ಇದೆಲ್ಲದರ ನಡುವೆ ಸಂಕಷ್ಟಕ್ಕೀಡಾದವರು ಮಧ‍್ಯಮ ವರ್ಗದವರು.
ತಿಂಗಳ ಸಂಬಳ ನೆಚ್ಚಿಕೊಂಡು ಬದುಕುತ್ತಿರುವ ಹಲವು ಕುಟುಂಬಗಳು ವೇತನವೂ ಬರದೇ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರವೇನೋ ವೇತನ ನೀಡಬೇಕು ಎಂದು ಆದೇಶಿಸಿದೆ. ಆದರೂ ಕೆಲವು ಖಾಸಗಿ ಕಂಪನಿಗಳು ವೇತನ ನೀಡದೇ ಸತಾಯಿಸುತ್ತಿವೆ. ಇನ್ನು, ಕೆಲವರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಕೆಲವು ಕುಟುಂಬಗಳು ತಮ್ಮ ತಿಂಗಳ ಸಂಬಳ ನೆಚ್ಚಿಕೊಂಡು ಲೋನ್ ಮಾಡಿಕೊಂಡಿದ್ದೂ ಇದೆ. ಇವರೆಲ್ಲರ ಪರಿಸ್ಥಿತಿ ಈಗ ಹೇಳುವಂತಿಲ್ಲ. ಈಗಲೇ ಹೀಗಾದರೆ ಲಾಕ್ ಡೌನ್ ಮುಗಿದ ಬಳಿಕ ಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಅಂತೂ ಕೊರೋನಾ ಎಂಬ ಮಹಾಮಾರಿ ಹಲವರ ಬದುಕು ದುಸ್ತರವಾಗಿಸಿರುವುದು ಸುಳ್ಳಲ್ಲ.