Select Your Language

Notifications

webdunia
webdunia
webdunia
webdunia

ಮೈಕ್ರೋಸಾಫ್ಟ್ ಡೌನ್: ಬ್ಯಾಂಕ್, ಏರ್ ಪೋರ್ಟ್ ಸೇರಿದಂತೆ ಎಲ್ಲೆಡೆ ತಲ್ಲಣ

microsoft

Krishnaveni K

ನವದೆಹಲಿ , ಶುಕ್ರವಾರ, 19 ಜುಲೈ 2024 (15:05 IST)
Photo Credit: Facebook
ನವದೆಹಲಿ: ಮೈಕ್ರೋಸಾಫ್ಟ್ ಸರ್ವರ್ ಡೌನ್ ಆದ ಪರಿಣಾಮ ಇಂದು ಇದ್ದಕ್ಕಿದ್ದಂತೆ ವಿಶ್ವದಾದ್ಯಂತ ವಿಮಾನಯಾನ, ಆಸ್ಪತ್ರೆ, ಷೇರು ಮಾರುಕಟ್ಟೆ ಸೇರಿದಂತೆ ಅನೇಕ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅಡ್ಡಿಯುಂಟಾದ ಪ್ರಸಂಗ ನಡೆದಿದೆ.

ಮೈಕ್ರೋಸಾಫ್ಟ್ ಸರ್ವರ್ ಡೌನ್ ಆದ ಪರಿಣಾಮ ಅನೇಕ ಸಂಸ್ಥೆಗಳಲ್ಲಿ ಕೆಲಸ ನಿರ್ವಹಣೆಗೆ ಇದ್ದಕ್ಕಿದ್ದಂತೆ ಸಮಸ್ಯೆಯಾಯಿತು. ಐಟಿ-ಬಿಟಿ ವಲಯ ಸೇರಿದಂತೆ ಪ್ರಪಂಚಾದ್ಯಂತ ಈ ವ್ಯತ್ಯಯ ಉಂಟಾಯಿತು. ಇದರಿಂದ ಕೆಲವೆಡೆ ವಿಮಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಇತರೆ ಉದ್ಯಮ, ಸಂಸ್ಥೆಗಳಲ್ಲೂ ಕಾರ್ಯನಿರ್ವಹಣೆ ಏಕಾ ಏಕಿ ಸ್ಥಗಿತಗೊಳಿಸಬೇಕಾಗಿ ಬಂತು.

ಸರ್ವರ್ ಡೌನ್ ಆಗಿದ್ದರಿಂದ ವಿಶ್ವದ ಅನೇಕ ಕಡೆ ವಿಮಾನದ ಹಾರಾಟದ ಬಗ್ಗೆ ಮಾಹಿತಿ, ಚೆಕ್ ಇನ್-ಚೆಕ್ ಔಟ್ ಮಾಹಿತಿ ಸಿಗದೇ ಪ್ರಯಾಣಿಕರು ಪರದಾಡುವಂತಾಯಿತು. ನೆಟ್ಟಿಗರೊಬ್ಬರು ಕೈ ಬರಹದಲ್ಲಿರುವ ಬೋರ್ಡಿಂಗ್ ಪಾಸ್ ಪ್ರಕಟಿಸಿ ಈಗಿನ ಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ, ವಿಮಾನ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬೈ ವಿಮಾನ ನಿಲ್ದಾಣಗಳಲ್ಲೂ ಕಾರ್ಯನಿರ್ವಹಣೆ ಕೆಲವು ಕಾಲ ಅಲ್ಲೋಲಕಲ್ಲೋಲವಾಗಿದೆ. ಭಾರತ ಮಾತ್ರವಲ್ಲದೆ, ಜರ್ಮನಿ, ಅಮೆರಿಕಾ ಸೇರಿದಂತೆ ಏಕಕಾಲಕ್ಕೆ ಹಲವು ದೇಶಗಳಲ್ಲಿ ಈ ಸಮಸ್ಯೆ ಉದ್ಭವಿಸಿತು.

ಖಾಸಗಿ ಸಂಸ್ಥೆಗಳಲ್ಲೂ ಉದ್ಯೋಗಿಗಳು ಕ್ಷಣ ಕಾಲ ಏನಾಗುತ್ತಿದೆ ಎಂದು ತಿಳಿಯದೇ ಲ್ಯಾಪ್ ಟಾಪ್ ಗಳನ್ನು ರಿಸ್ಟಾರ್ಟ್ ಮಾಡಿ ನೋಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೇವಲ ವಿಮಾನ ಯಾನ, ಖಾಸಗಿ ಕಂಪನಿಗಳು ಮಾತ್ರವಲ್ಲದೆ, ಬ್ಯಾಂಕ್ ಸೇವೆಯಲ್ಲೂ ವ್ಯತ್ಯಯವುಂಟಾಗಿದೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮೈಕ್ರೋಸಾಫ್ಟ್ ಸಂಸ್ಥೆ ಯುಎಸ್ ವಿಭಾಗದಲ್ಲಿ ಕ್ಲೌಡ್ ಸರ್ವಿಸ್ ನಲ್ಲಿ ಸಮಸ್ಯೆಯಾಗಿದ್ದು ನಿಖರವಾಗಿ ಏನು ಸಮಸ್ಯೆ ಎಂದು ಪತ್ತೆ ಮಾಡುವುದಾಗಿ ಹೇಳಿದೆ. ಇನ್ನು, ಮೈಕ್ರೋಸಾಫ್ಟ್ ಡೌನ್ ಆಗುತ್ತಿದ್ದಂತೇ ಸೋಷಿಯಲ್ ಮೀಡಿಯಾದಲ್ಲೂ ನೆಟ್ಟಿಗರು ತಮ್ಮ ಆತಂಕ ತೋಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ರೆ ಎಂದು ಗಂಟಲು ಹರಿದುಕೊಂಡು ಕೂಗಿದ ಶಾಸಕ ಪ್ರದೀಪ್ ಈಶ್ವರ್