Publish Date: Tue, 04 Aug 2026 (11:31 IST)
Updated Date: Tue, 04 Aug 2026 (11:32 IST)
ಮಲಪ್ಪುರಂ (ಕೇರಳ): ಕೇರಳದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಮಲಪ್ಪುರಂ ಜಿಲ್ಲೆಯಲ್ಲಿ ಕಣ್ಣಿಮೆ ಮುಚ್ಚಿ ತೆರೆಯುವುದರೊಳಗೆ ಸಂಭವಿಸಿದ ಭೀಕರ ಭೂಕುಸಿತದ ದೃಶ್ಯ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಭಾರೀ ಮಳೆಯಿಂದಾಗಿ ಬೆಟ್ಟದ ದೊಡ್ಡ ಭಾಗವೊಂದು ಸೀಳಿಕೊಂಡು ಧರೆಗುರುಳಿದ್ದು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಪ್ರಾಣಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡುವ ವೀಡಿಯೊ ವೈರಲ್ ಆಗಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮಲಪ್ಪುರಂನ ಮಲೆನಾಡು ಭಾಗದಲ್ಲಿ ಮಣ್ಣು ಸಡಿಲಗೊಂಡು ಈ ದುರಂತ ಸಂಭವಿಸಿದೆ. ಬೆಟ್ಟದ ಮೇಲ್ಭಾಗದಿಂದ ಬೃಹತ್ ಪ್ರಮಾಣದ ಮಣ್ಣು, ಕಲ್ಲುಗಳು ಮತ್ತು ಮರಗಳು ನದಿಯಂತೆ ಧಾವಿಸಿ ಬಂದವು.
ಭೂಕುಸಿತದ ಮುನ್ಸೂಚನೆ ಸಿಗುತ್ತಿದ್ದಂತೆ ಸ್ಥಳದಲ್ಲಿದ್ದ ಜನರು "ಓಡಿ.. ಓಡಿ.." ಎಂದು ಚೀರುತ್ತಾ ಸುರಕ್ಷಿತ ಸ್ಥಳಗಳತ್ತ ಧಾವಿಸಿದರು. ಮಣ್ಣು ಮತ್ತು ಭಗ್ನಾವಶೇಷಗಳು ವೇಗವಾಗಿ ಹರಿದುಬರುತ್ತಿದ್ದ ದೃಶ್ಯವನ್ನು ಕಂಡ ಜನ ಸಮೂಹವು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆಯುದ್ದಕ್ಕೂ ಓಡುತ್ತಿರುವ ದೃಶ್ಯ ನಡುಕ ಹುಟ್ಟಿಸುವಂತಿತ್ತು.
ಪರಿಸ್ಥಿತಿಯ ಗಂಭೀರತೆ ಅರಿತ ಸ್ಥಳೀಯರು ಮತ್ತು ಸ್ವಯಂಸೇವಕರು ಇತರರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಸಿದ್ದರಿಂದ ದೊಡ್ಡ ಮಟ್ಟದ ಪ್ರಾಣಹಾನಿ ತಪ್ಪಿದಂತಾಗಿದೆ. ಭೂಕುಸಿತದ ರಭಸಕ್ಕೆ ಹಲವಾರು ಮನೆಗಳು, ರಸ್ತೆಗಳು ಹಾಗೂ ಕೃಷಿ ಭೂಮಿ ಸಂಪೂರ್ಣವಾಗಿ ನಾಶವಾಗಿವೆ. ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಹಲವು ಗ್ರಾಮಗಳು ಬಾಹ್ಯ ಪ್ರಪಂಚದಿಂದ ಸಂಪರ್ಕ ಕಳೆದುಕೊಂಡಿವೆ. ಹವಾಮಾನ ಇಲಾಖೆಯು ಮಲಪ್ಪುರಂ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯಾಗುವ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಿದೆ. ನದಿ ಪಾತ್ರದಲ್ಲಿ ಮತ್ತು ಬೆಟ್ಟದ ಸಾಲುಗಳಲ್ಲಿ ವಾಸಿಸುವ ಜನರು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ