Publish Date: Tue, 21 Apr 2026 (20:29 IST)
Updated Date: Tue, 21 Apr 2026 (20:31 IST)
ತ್ರಿಶೂರ್: ಕೇರಳದ ಸುಪ್ರಸಿದ್ಧ ತ್ರಿಶೂರ್ ಪೂರಂ ಹಬ್ಬಕ್ಕಾಗಿ ಪಟಾಕಿಗಳನ್ನು ತಯಾರಿಸುತ್ತಿದ್ದ ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಮಂಗಳವಾರ ಮಧ್ಯಾಹ್ನ ಭೀಕರ ಸ್ಫೋಟ ಸಂಭವಿಸಿ ಸುಮಾರು 13 ಜನರು ಮೃತಪಟ್ಟು, 40ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಸ್ಫೋಟದ ತೀವ್ರತೆಗೆ ಪಟಾಕಿ ಸಂಗ್ರಹಣಾ ಕೇಂದ್ರ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಐವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಲಪ್ಪಿಲ್ಲಿ ತಾಲೂಕಿನ ಮುಂಡತಿಕ್ಕೋಡು ಎಂಬಲ್ಲಿ ಈ ಸ್ಫೋಟ ಸಂಭವಿಸಿದೆ. ಘಟನಾ ಸ್ಥಳದಿಂದ ಈವರೆಗೆ 5 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಗುರುತು ಪತ್ತೆ ಹಚ್ಚಲಾಗದ ಸ್ಥಿತಿಯಲ್ಲಿರುವ ಇತರ 3 ದೇಹದ ಭಾಗಗಳನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ವಶಪಡಿಸಿಕೊಂಡಿದೆ.
ವಿಶ್ವವಿಖ್ಯಾತ ತ್ರಿಶೂರ್ ಪೂರಂ ಉತ್ಸವದ ಹಿನ್ನೆಲೆಯಲ್ಲಿ ಇಲ್ಲಿ ಬೃಹತ್ ಪ್ರಮಾಣದಲ್ಲಿ ಪಟಾಕಿಗಳನ್ನು ತಯಾರಿಸಿ ಸಂಗ್ರಹಿಸಿಡಲಾಗಿತ್ತು ಎಂದು ತಿಳಿದುಬಂದಿದೆ. ಸ್ಫೋಟಕ್ಕೆ ನಿಖರವಾದ ಕಾರಣವಿನ್ನೂ ತಿಳಿದುಬಂದಿಲ್ಲವಾಗಿದ್ದು, ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಇನ್ನೂ ಘಟನಾ ಮಾಹಿತಿ ಪಡೆದಿರುವ ಸಿಎಂ ಪಿಣರಾಯಿ ವಿಜಯನ್ ಅವರು ಗಾಯಾಳುಗಳಿಗೆ ಎಲ್ಲಾ ರೀತಿಯ ವೈದ್ಯಕೀಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪರಿಸ್ಥಿತಿ ಮೇಲ್ವಿಚಾರಣೆ ನಡೆಸಿ ಮಾಹಿತಿ ನೀಡುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.