Select Your Language

Notifications

webdunia
webdunia
webdunia
webdunia

ಮುಂದೂಡಿದ ಮಹದಾಯಿ ಸಭೆ: ರಾಜ್ಯ ಬಿಜೆಪಿಗೆ ನುಂಗಲಾರದ ತುತ್ತು

ಮುಂದೂಡಿದ ಮಹದಾಯಿ ಸಭೆ: ರಾಜ್ಯ ಬಿಜೆಪಿಗೆ ನುಂಗಲಾರದ ತುತ್ತು
ಬೆಂಗಳೂರು , ಶನಿವಾರ, 22 ಅಕ್ಟೋಬರ್ 2016 (09:05 IST)
ಬೆಂಗಳೂರು: ಮಹದಾಯಿಯ ರಾಜಕೀಯ ಜಿದ್ದಾ-ಜಿದ್ದಿ ತಾರಕಕೇರಿದ್ದು, ರಾಜ್ಯ ಬಿಜೆಪಿಯನ್ನು ತೀರಾ ಇಕ್ಕಟ್ಟಿಗೆ ಸಿಲುಕಿಸಿದೆ. ಮಹದಾಯಿ ವಿಷಯದಲ್ಲಿ ಬಿಜೆಪಿ ಎಂದೂ ರಾಜಕಾರಣ ಮಾಡಿಲ್ಲ ಎಂದು ಜಗದೀಶ ಶೆಟ್ಟರ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಮೇಲಿಂದ ಮೇಲೆ ಹೇಳಿಕೆ ನೀಡುತ್ತ, ತಮ್ಮ ನಿಲುವೇನೆಂಬುದನ್ನು ಜನರ ಮುಂದೆ ಸ್ಪಷ್ಟಪಡಿಸುತ್ತಲೇ ಇದ್ದರು. ಇವುಗಳ ನಡುವೆಯೇ ಗೋವಾ ಬಿಜೆಪಿ ಸರಕಾರ ಮಾತುಕತೆಯನ್ನು ಮುಂದೂಡಿದ್ದು, ಸ್ಥಳೀಯ ಮುಖಂಡರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.
 

 
ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೆಕರ್ ಮುಂಬೈ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೆ, ಅಲ್ಲಿನ ವಿರೋಧ ಪಕ್ಷದ ಮುಖಂಡ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಹ ರಾಣೆ 'ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಹರಿಸಲು ನಾವು ಬಿಡುವುದಿಲ್ಲ' ಎಂದು ಮಹದಾಯಿ ವಿಷಯವನ್ನು ರಾಜಕೀಕರಣಗೊಳಿಸಿದ್ದರು. ಅವರ ಈ ಹೇಳಿಕೆ ಮುಂದಿನ ವರ್ಷ ಮಾರ್ಚ್ ನಲ್ಲಿ ನಡೆಯಲಿರುವ ಗೋವಾ ವಿಧಾಸಭೆ ಚುನಾವಣೆಯನ್ನು ಗುರಿಯಾಗಿರಿಸಿಕೊಂಡೇ ಇತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.
 
2007ರ ಚುನಾವಣೆಯಲ್ಲಿ ಗೋವಾ ಕಾಂಗ್ರೆಸ್ಸಿಗರು ಸೋನಿಯಾ ಗಾಂಧಿ ಮೂಲಕ, 'ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ಹರಿಸಲು ಬಿಡುವುದಿಲ್ಲ' ಎಂದು ಹೇಳಿಕೆ ಕೊಡಿಸಿದ್ದರು. ತತ್ಪರಿಣಾಮ ಅಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವನ್ನು ಸಾಧಿಸಿತ್ತು. ಇದೀಗ ಅದೇ ವಿಷಯವನ್ನು ಮುಂದಿಟ್ಟುಕೊಂಡು ಹೋದರೆ, ಚುನಾವಣೆಯಲ್ಲಿ ಗೆಲುವು ಸಾಧಿಸಬಹುದೆನ್ನುವುದು ಅಲ್ಲಿಯ ಕಾಂಗ್ರೆಸ್ ಮುಖಂಡರ ಲೆಕ್ಕಾಚಾರ.

ಗೋವಾ ಬಿಜೆಪಿ ಸರಕಾರಕ್ಕೆ ಒಂದು ಹಂತದಲ್ಲಿ ಮಾತುಕತೆಗೆ ಒಲವಿತ್ತು. ಪ್ರತಾಪ್ ಸಿಂಹ ರಾಣೆಯವರು ವ್ಯತಿರಿಕ್ತವಾದ ಹೇಳಿಕೆ ನೀಡಿಲ್ಲವಾಗಿದ್ದರೆ, ನಿನ್ನೆ ಮೊದಲ ಹಂತದ ಮಾತುಕತೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ನಡುವೆ ಮುಗಿದು ಹೋಗುತ್ತಿತ್ತು. ಆದರೆ, ಇದೀಗ ಆ ವಿಷಯ ಗೋವಾದಲ್ಲಿ ರಾಜಕೀಯ ಕಾವು ಪಡೆದುಕೊಳ್ಳುತ್ತಿರುವುದರಿಂದ ಬಿಜೆಪಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ.
 
 ಈ ಹಿನ್ನೆಲೆಯಲ್ಲಿ ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೆಕರ್ ಸದ್ಯಕ್ಕೆ ಕೆಲಸದ ಒತ್ತಡದಿಂದ ಸಭೆಯಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ ಎನ್ನುವ ಮೂಲಕ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅವರೇನೂ ಸದ್ಯ ನಿರಾಳರಾದರು. ಆದರೆ, ರಾಜ್ಯ ಬಿಜೆಪಿ ಮುಖಂಡರಿಗೆ ಅವರ ನಿರ್ಧಾರ ಸಹಜವಾಗಿಯೇ ಇಕ್ಕಟ್ಟಿಗೆ ಸಿಲುಕಿಸಿದೆ. ಒಮ್ಮಿಂದೊಮ್ಮೆಲೆ ಸಭೆ ಮುಂದೂಡಿ ಉಲ್ಟಾ ಹೊಡೆದಿರುವುದು ಮುಂದಿನ ದಿನಗಳಲ್ಲಿ ಶೆಟ್ಟರ್ ಆ್ಯಂಡ್ ಟೀಂಗೆ ಮರ್ಮಘಾತವನ್ನೇ ನೀಡಲಿದೆ. ಹೀಗಾಗಿ ಬಿಜೆಪಿ ಮುಖಂಡರು, ಸಭೆಯನ್ನು ರದ್ದು ಪಡಿಸಿಲ್ಲ, ಕೇವಲ ಮುಂದೂಡಲಾಗಿದೆ ಎಂದು ತೇಪೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ. ಇವೆಲ್ಲ ರಾಜಕೀಯ ದೊಂಬರಾಟ ಎನ್ನುವುದು ಸುದೀರ್ಘ ಕಾಲದಿಂದ ಪ್ರತಿಭಟನೆ ಮಾಡುತ್ತ ಬಂದಿರುವ ರೈತನಿಗೆ ತಿಳಿಯದ ವಿಷಯವೇನಲ್ಲ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ 35 ಟನ್ ವಿದೇಶಿ ನಾಣ್ಯ