ಮಹಾರಾಷ್ಟ್ರದ ಮಹಾಡ್ ಬಳಿ ಗೋವಾ- ಮಹಾರಾಷ್ಟ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ರಿಟಿಷ್ ಕಾಲದ ಸೇತುವೆ ಕುಸಿದ ಪರಿಣಾಮ ಸಾವಿತ್ರಿ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ 15 ದೇಹಗಳು ಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರೆದಿದೆ. ಮತ್ತೂ 50ಕ್ಕಿಂತ ಹೆಚ್ಚು ಜನರು ಕೊಚ್ಚಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ನಾಪತ್ತೆಯಾಗಿರುವ ಎರಡು ಬಸ್‌ಗಳ ಶೋಧಕ್ಕೆ ಸರ್ವ ಪ್ರಯತ್ನ ನಡೆಸಿರುವ ಎನ್‌ಡಿಆರ್‌ಎಫ್ ಗುರುವಾರ 300 ಕೆ.ಜಿ. ತೂಕದ ಅಯಸ್ಕಾಂತವನ್ನು ಕ್ರೇನ್ ಸಹಾಯದಿಂದ ನದಿಯಲ್ಲಿ 40 ಅಡಿ ಆಳದಲ್ಲಿ ಇಳಿಬಿಟ್ಟು ಬಸ್ ಪತ್ತೆ ಹಚ್ಚಲು ಪ್ರಯತ್ನ ನಡೆಸುತ್ತಿದೆ. ರಕ್ಷಣಾ ಕಾರ್ಯಾಚರಣೆಗೆ ಡ್ರೋನ್ ಬಳಕೆ ಕೂಡ ಮಾಡಲಾಗ್ತಿದೆ. ನಾಪತ್ತೆಯಾದವರು ನದಿ ನೀರಿನ ಮೂಲಕ ಸಮುದ್ರ ಪಾಲಾಗಿರೋ ಶಂಕೆ ವ್ಯಕ್ತವಾಗಿದೆ.
ಸಾವಿತ್ರಿ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವುದರಿಂದ ಸೆಳೆತಕ್ಕೆ ಮೃತದೇಹಗಳು ಘಟನಾ ಸ್ಥಳದಿಂದ 50ರಿಂದ 60 ಕಿ.ಮೀ.ವರೆಗೆ ಮೃತದೇಹಗಳು ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪತ್ತೆಯಾದ ಮೃತ ದೇಹಗಳಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕರದ್ದು ಸೇರಿದೆ ಎಂದು ಹೇಳಲಾಗುತ್ತಿದೆ.
ಒಂದು ಹೋಂಡಾ ಸಿಟಿ ಮತ್ತು ಒಂದು ತವೆರಾ ಸಹ ನದಿಯಲ್ಲಿ ಕೊಚ್ಚಿ ಹೋಗಿದ್ದು, ತವೆರಾದಲ್ಲಿ ಪ್ರಯಾಣಿಸುತ್ತಿದ್ದ ಶೇವಂತಿ ಮಿರ್ಗಲ್ ಮತ್ತು ಸ್ನೇಹಾ ಬೈಕರ್ ದೇಹ ಪತ್ತೆಯಾಗಿದೆ.
ನೌಕಾಪಡೆ, ಎನ್‌ಡಿಆರ್‌ಎಫ್ ಹಾಗೂ ಕರಾವಳಿ ಕಾವಲು ಪಡೆಯ 160 ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಪರಿಹಾರ ಕಾರ್ಯದಲ್ಲಿ ಕೈಜೋಡಿಸಿದ್ದಾರೆ.
ರಾಜ್ಯದಲ್ಲಿ ಮಳೆ ಮುಂದುವರೆದಿದ್ದು ನೀರಿನ ಸೆಳೆತ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಹಾಡ್ ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.