ಅಪರಾಧಿಗಳನ್ನು ಶೂಟ್ ಮಾಡಲು ಬಿಡಿ, ಇಲ್ಲದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ- ದೆಹಲಿ-ಕಾನ್ಪುರ ಹೆದ್ದಾರಿಯಲ್ಲಿ ಶನಿವಾರ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಆಘಾತಗೊಂಡಿರುವ ತಾಯಿ -ಮಗಳ ಕುಟುಂಬ ನೀಡಿರುವ ಎಚ್ಚರಿಕೆ ಇದು.
ಅಪರಾಧಿಗಳನ್ನು ನಮ್ಮ ವಶಕ್ಕೆ ನೀಡಿ ಎಂದವರು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನ್ನಾಡುತ್ತಿದ್ದ ಬಾಲಕಿಯ ತಂದೆ ದುಷ್ಕರ್ಮಿಗಳನ್ನು ಕೊಲ್ಲಲು ನನ್ನ ಪತ್ನಿ ಮತ್ತು ಮಗಳಿಗೆ ಅನುಮತಿ ನೀಡಿ ಎಂದು ಸರ್ಕಾರ ಮತ್ತು ನ್ಯಾಯಾಂಗದ ಬಳಿ ಮನವಿ ಮಾಡಿಕೊಳ್ಳುತ್ತೇನೆ.ಇಲ್ಲದಿದ್ದರೆ ಸಂಪೂರ್ಣ ಕುಟುಂಬ ವಿಷ ಕುಡಿದು ಸಾವಿಗೆ ಶರಣಾಗುತ್ತೇವೆ ಎಂದು ಹೇಳಿದ್ದಾರೆ.
ಬುಲಂದ್‌ಶಹರ್ ಸಮೀಪ ಶನಿವಾರ ನಡೆದ ಸಾಮೂಹಿಕ ಅತ್ಯಾಚಾರ ಸಂಪೂರ್ಣ ದೇಶವನ್ನು ಬೆಚ್ಚಿ ಬೀಳಿಸಿದೆ.
ಈ ಪ್ರಕರಣದಲ್ಲಿ ಕೈಗೊಳ್ಳುವ ಅಂತಿಮ ತೀರ್ಮಾನ ಮತ್ತೆ ಇಂತಹ ಘೋರ ಕೃತ್ಯಗಳು ಮರುಕಳಿಸದಿರಲು ಎಚ್ಚರಿಕೆಯ ಗಂಟೆಯಾಗಿರಬೇಕು. ತಾಯಿ ಮತ್ತು ಮಗಳನ್ನು ಥಳಿಸಿ ಸಾಮೂಹಿಕ ಅತ್ಯಾಚಾರ ಮಾಡಿದರೆ ಉಂಟಾಗುವ ನೋವು ಅವರ ಕುಟುಂಬಕ್ಕೆ ಅಷ್ಟೇ ಗೊತ್ತು ಎಂದು ಬಾಲಕಿಯ ಚಿಕ್ಕಪ್ಪ ಹೇಳಿದ್ದಾರೆ.
ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ಪೀಡಿತರು ಗುರುತಿಸಿದ್ದಾರೆ ಎಂದು ಯುಪಿ ಪೊಲೀಸರು ತಿಳಿಸಿದ್ದಾರೆ.
ಹೆದ್ದಾರಿಯಲ್ಲಿ ಬರುತ್ತಿದ್ದ ಕಾರೊಂದನ್ನು ತಡೆಗಟ್ಟಿದ ದುಷ್ಕರ್ಮಿಗಳು ಅದರಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸದಸ್ಯರ ಮೇಲೆ ಹಲ್ಲೆ ಮಾಡಿ ಬಂದೂಕು ತೋರಿಸಿ ತಾಯಿ ಮತ್ತು 13 ವರ್ಷದ ಮಗಳನ್ನು ಎಳೆದೊಯ್ದ ಅತ್ಯಾಚಾರ ನಡೆಸಿದ್ದರು. ಘಟನೆ ನಡೆದ ಸ್ಥಳದಿಂದ 100ಮೀಟರ್‌ಗಳ ಅಂತರದಲ್ಲೇ ಪೊಲೀಸ್ ಠಾಣೆ ಇದ್ದು, ಹಲ್ಲೆಗೊಳಗಾದವರ ಕಾರು 3 ಗಂಟೆಗಳ ಕಾಲ ಅಲ್ಲಿಯೇ ನಿಂತಿದ್ದರೂ ಪೊಲೀಸರ ಗಮನಕ್ಕೆ ಬಂದಿರಲಿಲ್ಲ.
ಘಟನೆಯ ಬಳಿಕ ಶುಕ್ರವಾರ ರಾತ್ರಿಯಿಡಿ ಭೀತಿಯಲ್ಲೆ ಕಳೆದ ಕುಟುಂಬ ಶನಿವಾರ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿತ್ತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.