ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸೋಮವಾರ ಪ್ರವಾಹ ಪೀಡಿತರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸದಾ ವಿಲಕ್ಷಣ ಹೇಳಿಕೆ ನೀಡುವುದರಿಂದಲೇ ಸುದ್ದಿಯಾಗುವ ಅವರು ಈ ಸಂದರ್ಭದಲ್ಲಿ ಸಹ ಅಸಂವೇದನೀಯ ಹೇಳಿಕೆ ನೀಡುವುದರ ಮೂಲಕಇರಿಸುಮುರಿಸಿಗೆ ಒಳಗಾಗಿದ್ದಾರೆ.
ಎಲ್ಲರೂ ಮನೆಯೊಳಗೆ ಗಂಗಾಜಲವನ್ನು ಪಡೆಯಲಾರರು. ರಾಜ್ಯದಲ್ಲಿ ಪ್ರವಾಹದಿಂದ ಪೀಡಿತರಾಗಿರುವವರು ಅದೃಷ್ಟವಂತರು. ಹೀಗಾಗಿ ಗಂಗಾಜಲ ತಾನಾಗಿಯೇ ಅವರ ಮನೆಯೊಳಗೆ ಬಂದಿದೆ ಎಂದು ಅವರು ಅಸಂಬದ್ಧ ಹೇಳಿಕೆ ನೀಡಿದ್ದಾರೆ.
ಬಿಹಾರದಲ್ಲಾದ ವ್ಯಾಪಕ ಮಳೆಯಿಂದಾಗಿ ಗಂಗಾ ಮತ್ತು ಇತರ ಪ್ರಮುಖ ನದಿಗಳಲ್ಲಿ ಪ್ರವಾಹ ಬಂದು ಸಾವಿರಾರು ಜನರು ಮನೆಮಠ, ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಈ ನೈಸರ್ಗಿಕ ವಿಪತ್ತಿನ ಪರಿಣಾಮ 14 ಜನರು ಸಾವನ್ನಪ್ಪಿದ್ದಾರೆ. ಅದರಲ್ಲೂ ಭೋಜ್ಪುರ್ ಜಿಲ್ಲೆಯೊಂದರಲ್ಲಿಯೇ 9 ಮಂದಿ ಅಸುನೀಗಿದ್ದಾರೆ.
ಸರ್ಕಾರ ತಮಗೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸುತ್ತಿರುವ ಪ್ರವಾಹ ಪೀಡಿತರನ್ನು ಭೇಟಿಯಾದ ಲಾಲು, ಗಂಗಾಜಲ ಎಲ್ಲರ ಮನೆ ಒಳಗೆ ಬರುವುದಿಲ್ಲ. ನೀವು ಅದೃಷ್ಟವಂತರು. ತಾಯಿ ಗಂಗೆ ನಿಮ್ಮನ್ನು ಕಾಪಾಡುತ್ತಾಳೆ ಎಂದಿದ್ದಾರೆ.
ಏತನ್ಮಧ್ಯೆ ಮಂಗಳವಾರ ಪ್ರಧಾನಿ ಮೋದಿಯವರನ್ನು ಭೇಟಿಯಾಗಿರುವ ಬಿಹಾರ್ ಸಿಎಂ ನಿತೀಶ್ ಕುಮಾರ್ ರಾಜ್ಯದ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.