ನವದೆಹಲಿ : ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ನಿರಂತರ ಮಳೆ ಮತ್ತು ಭೂಕುಸಿತದಿಂದ 66 ಜನರು ಸಾವನ್ನಪ್ಪಿದ್ದಾರೆ. ಭೂ ಕುಸಿತದಿಂದಾಗಿ ಮನೆಗಳ ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸಿವೆ. ಆಗಸ್ಟ್ 13 ರಿಂದ ಭಾರೀ ಮಳೆ ಆಗುತ್ತಿದ್ದು, ಇದರ ಪರಿಣಾಮ 60 ಜನರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.
ಅಲ್ಲದೇ ಮುಂದಿನ ಎರಡು ದಿನಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಮತ್ತು ಮುಂದಿನ ನಾಲ್ಕು ದಿನಗಳಲ್ಲಿ ಉತ್ತರಾಖಂಡದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಕಚೇರಿ ಮುನ್ಸೂಚನೆ ನೀಡಿದೆ.
ಮಂಗಳವಾರ ನಡೆದ ರಕ್ಷಣಾ ಕಾರ್ಯಚರಣೆಯಲ್ಲಿ ಭೂಕುಸಿತದಿಂದಾಗಿ ಅವಶೇಷಗಳಲ್ಲಿ ಸಿಲುಕಿದ್ದ ಮೂರು ದೇಹಗಳನ್ನು ಹೊರತೆಗೆಯಲಾಗಿದೆ. ಶಿಮ್ಲಾದಲ್ಲಿ ಕುಸಿದ ಶಿವ ದೇವಾಲಯದ ಅವಶೇಷಗಳಿಂದ ಒಬ್ಬರ ದೇಹವನ್ನು ಹೊರತೆಗೆಯಲಾಗಿದೆ. ಈ ನಡುವೆ ನಗರದಲ್ಲಿ ಹೊಸದಾಗಿ ಭೂಕುಸಿತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಶಿಮ್ಲಾದ ಕೃಷ್ಣನಗರ ಪ್ರದೇಶದಲ್ಲಿ ಭೂಕುಸಿತದ ನಂತರ ಆರು ತಾತ್ಕಾಲಿಕ ಮನೆಗಳು ಸೇರಿದಂತೆ ಕನಿಷ್ಠ ಎಂಟು ಮನೆಗಳು ಕುಸಿದಿವೆ. ಸಮ್ಮರ್ ಹಿಲ್ನ ಶಿವ ದೇವಾಲಯ ಸ್ಥಳದಲ್ಲಿ 12, ಫಾಗ್ಲಿಯಲ್ಲಿ ಐದು ಮತ್ತು ಕೃಷ್ಣಾನಗರದಲ್ಲಿ ಎರಡು ಶವಗಳನ್ನು ಹೊರ ತೆಗೆಯಲಾಗಿದೆ. ಕುಸಿದ ಶಿವ ದೇವಾಲಯದಲ್ಲಿ ಇನ್ನೂ 10 ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ಇದೆ.
ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ ನೀಡಲಾಗಿದೆ. ಹಿಮಾಚಲ ಪ್ರದೇಶ ವಿಶ್ವವಿದ್ಯಾನಿಲಯವು ಆಗಸ್ಟ್ 19 ರವರೆಗೆ ಬೋಧನಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ. ವಿಶ್ವವಿದ್ಯಾನಿಲಯದ ಗ್ರಂಥಾಲಯವು ಆಗಸ್ಟ್ 20 ರವರೆಗೆ ಮುಚ್ಚಿರಲಿದೆ.