ಕಳೆದೆರಡು ತಿಂಗಳಿಂದ ನರೇಂದ್ರ ಮೋದಿಯನ್ನು ಅತಿಯಾಗಿ ಪ್ರಂಶಸೆ ಮಾಡುತ್ತಿದ್ದ, ಮಾಜಿ ಐಪಿಎಸ್ ಅಧಿಕಾರಿ ಮತ್ತು ಅಣ್ಣಾ ಹಜಾರೆ ತಂಡದ ಸದಸ್ಯೆ ಕಿರಣ್ ಬೇಡಿ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡುವ ಸುಳಿವನ್ನು ನೀಡಿದ್ದಾರೆ.
ನೀವು ಬಿಜೆಪಿಗೆ ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.
ಪ್ರಬಲ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಚಳುವಳಿ ನಡೆಸುತ್ತಿದ್ದ ಅಣ್ಣಾ ಹಜಾರೆ ಕೋರ್ ತಂಡದ ಭಾಗವಾಗಿದ್ದ ಬೇಡಿ, ಮೋದಿ ನಾಯಕತ್ವವನ್ನು ಹೊಗಳುತ್ತಾ ಅವರು ದೇಶವನ್ನು ಪರಿಣಾಮಕಾರಿಯಾಗಿ ಮುನ್ನಡೆಸಿಕೊಂಡು ಹೋಗುತ್ತಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.
"ದೇಶ ಅನೇಕ ವರ್ಷಗಳಿಂದ ಅನಾಥ ಪ್ರಜ್ಞೆಯನ್ನು ಅನುಭವಿಸುತ್ತಿತ್ತು. ಅಂತಿಮವಾಗಿ ಕಾಳಜಿಯುಳ್ಳ ಮತ್ತು ಸಮರ್ಥ ರಕ್ಷಕನನ್ನು ದೇಶ ಪಡೆದುಕೊಂಡಿದೆ. ಈಗ ನಾವು ಸೃಜನಶೀಲತೆ ಕಡೆ ಗಮನ ನೀಡಬಹುದು" ಎಂದು ಚುನಾವಣಾ ಫಲಿತಾಂಶ ಘೋಷಿತವಾದ ಮೇ 16 ರಂದು ಕಿರಣ್ ಟ್ವಿಟ್ ಮಾಡಿದ್ದರು.
ನರೇಂದ್ರ ಮೋದಿ ಬಗ್ಗೆ ಸುಳ್ಳು ಮತ್ತು ಸಂಶಯವನ್ನು ಹರಡುತ್ತಿದ್ದ ಎಲ್ಲರಿಗೂ ಸರಿಯಾದ ಶಿಕ್ಷೆಯಾಗಿದೆ. ಭಾರತೀಯ ಮತದಾರ ಎಲ್ಲವನ್ನು ಗಮನಿಸಿದ್ದಾನೆ. ಇದು ಉತ್ತಮ ಉದ್ದೇಶಗಳ ಗೆಲುವು ಎಂದು ಮತ್ತೊಂದು ಟ್ವೀಟ್ ಮೂಲಕ ಅವರು ಹೇಳಿದ್ದಾರೆ.
ಸೋಮವಾರ ಬಿಜೆಪಿ, ಆಪ್ ಹಾಗೂ ಕಾಂಗ್ರೆಸ್ ಪಕ್ಷಗಳ ಜತೆ ಮಾತನಾಡಿದ್ದ ಆಪ್‌ನಿಂದ ಹೊರಹಾಕಲ್ಪಟ್ಟ ಶಾಸಕ ವಿನೋದ್ ಕುಮಾರ್ ಬಿನ್ನಿ, ಮತ್ತೆ ಅಸೆಂಬ್ಲಿ ಚುನಾವಣೆಯನ್ನು ನಡೆಸಿದರೆ ಸಾರ್ವಜನಿಕ ಹಣ ಪೋಲಾಗುತ್ತದೆ. ದೆಹಲಿ ಮುಖ್ಯಮಂತ್ರಿ ಹುದ್ದೆಗೆ ಕಿರಣ್ ಬೇಡಿಯನ್ನು ಪರಿಗಣಿಸೋಣ ಎಂದು ಸಲಹೆಯನ್ನು ನೀಡಿದ್ದರು.
ದೆಹಲಿಯಲ್ಲಿ ಚುನಾವಣೆ ನಡೆದರೆ ಕಿರಣ್ ಬೇಡಿಯನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಗುವುದು ಎಂದು ಊಹಿಸಲಾಗಿದೆ.