ಭೋಪಾಲ್ : ತಾನು 10ನೇ ತರಗತಿ ಪರೀಕ್ಷೆಯಲ್ಲಿ ಫೇಲ್ ಆಗುತ್ತೇನೆ. ಇದರಿಂದ ನನ್ನ ತಂದೆ ಥಳಿಸುತ್ತಾರೆ ಎಂಬ ಭಯದಿಂದ 15 ವರ್ಷದ ಬಾಲಕ ತಂದೆಯನ್ನೇ ಕೊಂದಿರುವ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ದುಲಿಚಂದ್ ಅಹಿರ್ವಾರ್ ಎಂದು ಗುರುತಿಸಲಾಗಿದ್ದು, ಏಪ್ರಿಲ್ 3 ರಂದು ಕೋಣೆಯಲ್ಲಿ ಮಲಗಿದ್ದಾಗ ದುಲಿಚಂದ್ ಅಹಿರ್ವಾರ್ ಅವರನ್ನು ಬಾಲಕ ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿದ್ದಾನೆ. ನಂತರ ಘಟನಾ ಸ್ಥಳದಿಂದ ಬಾಲಕ ಪರಾರಿಯಾಗುತ್ತಿರುವುದನ್ನು ನೆರೆಮನೆಯ ವೀರೇಂದ್ರ ಅಹಿರ್ವಾರ್ ಮತ್ತು ಇನ್ನೋರ್ವ ವ್ಯಕ್ತಿ ಗಮನಿಸಿದ್ದಾರೆ.
ಬಳಿಕ ಘಟನೆ ಕುರಿತಂತೆ ಪೊಲೀಸರು ನೆರೆಯವರನ್ನು ವಿಚಾರಿಸಿದಾಗ ವೀರೇಂದ್ರ ಅವರು ಬಾಲಕನ ಬಗ್ಗೆ ಮಾಹಿತಿ ನೀಡಿದ್ದು, ಬಾಲಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಈ ವೇಳೆ 10ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಮನೆಯಿಂದ ಹೊರಗೆ ಹಾಕುವುದಾಗಿ ತನ್ನ ತಂದೆ ಬೆದರಿಕೆ ಹಾಕಿದ್ದರು, ಅಲ್ಲದೇ ಓದಿಲ್ಲ ಅಂದರೆ ಗದರಿಸುತ್ತಿದ್ದರು ಎಂದು ಬಾಲಕ ಹೇಳಿದ್ದಾನೆ.
ಈ ಬಾರಿ ಪರೀಕ್ಷೆ ವೇಳೆ ಓದಿರಲಿಲ್ಲ ಮತ್ತು ಪರೀಕ್ಷೆಗಾಗಿ ಸರಿಯಾಗಿ ತಯಾರಿ ನಡೆಸಿರಲಿಲ್ಲ. ಹೀಗಾಗಿ ಫೇಲ್ ಆಗುತ್ತೇನೆ ಎಂಬ ಭಯವಿದ್ದರಿಂದ ತಂದೆಯನ್ನು ಕೊಲ್ಲಲು ನಿರ್ಧರಿಸಿದ್ದಾಗಿ ಸತ್ಯ ಬಹಿರಂಗಪಡಿಸಿದ್ದಾನೆ. ಇದೀಗ ಬಾಲಕನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಲ್ಲಿಂದ ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ.