ಮಕ್ಕಳ ಪ್ರೇಮ ಸಂಬಂಧಕ್ಕೆ ಪೋಷಕರು ಕೊಳ್ಳಿ ಇಡುವುದೇ ಹೆಚ್ಚು. ಅಂತಹ ಕಥೆಗಳನ್ನು ಕೇಳಿಯೇ ಇರುತ್ತೀರಾ.. ಆದರೆ ಇದೊಂದು ವಿಭಿನ್ನ ಕಥೆ. ಆದರೆ ಸಿನಿಮಾ ಕಥೆಯಲ್ಲ. 32 ವರ್ಷ ಹಿಂದೆ ಮೊಟಕುಗೊಂಡಿದ್ದ ತಾಯಿಯ ಪ್ರೀತಿಯ ಕಥೆಯನ್ನು ಮಗಳೇ ಮುಂದೆ ನಿಂತು ಪೂರ್ಣಗೊಳಿಸಿದ ವಿಶಿಷ್ಟ ಕಥೆ ಇದು.
ಈ ಸುಂದರ ಕಥೆಯ ನಾಯಕಿ ಅನಿತಾ ಚೆಂಬುವಿಲಯಿಲ್(52), ನಾಯಕ 68 ವರ್ಷದ ಜಿ ವಿಕ್ರಮನ್. ಅವರಿಬ್ಬರ ಮಿಲನಕ್ಕೆ ರೂವಾರಿಯಾದವಳು ಅನಿತಾ ಅವರ ಮಗಳು ಆತಿರಾ ದತ್ತನ್. ತನ್ನ ತಾಯಿ ಮತ್ತು ಆಕೆಯ ಪ್ರೇಮಿಯ ಮದುವೆ ಮಾಡಿಸಿ ಅವರಿಬ್ಬರನ್ನು ಒಂದಾಗಿಸಿದ್ದಾಳೆ ಆತಿರಾ. ತನ್ನ ತಾಯಿಯ ಪ್ರೇಮ ಕಥೆಯ ಕುರಿತಾಕೆ ಫೇಸ್‌ಬುಸ್‌ನಲ್ಲಿ ಹಂಚಿಕೊಂಡಿದ್ದಾಳೆ.
1984ರಲ್ಲಿ ಕೊಲ್ಲಂನ ಒಚಿರಾದಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದ ಅನಿತಾಗೆ ಟ್ಯೂಷನ್ ಸೆಂಟರ್ ಒಂದರಲ್ಲಿ ಶಿಕ್ಷಕನಾಗಿದ್ದ ವಿಕ್ರಮನ್ ಅವರ ಮೇಲೆ ಒಲವು ಮೂಡಿತ್ತು. ಆದರೆ ಅವರಿಬ್ಬರ ಪ್ರೀತಿಗೆ ಅನಿತಾ ತಂದೆ ಅಡ್ಡವಾಗಿದ್ದರು. ಅವರಿಬ್ಬರ ನಡುವಿದ್ದ ವಯಸ್ಸಿನ ಅಂತರ ಮತ್ತು ವಿಕ್ರಮನ್ ಸಿಪಿಐ ಕಾರ್ಯಕರ್ತರಾಗಿದ್ದರಿಂದ ಅನಿತಾ ತಂದೆ ಮದುವೆಗೆ ಸುತಾರಾಂ ಒಪ್ಪಲಿಲ್ಲ. ತಮ್ಮ ತಂದೆಯ ಒತ್ತಡಕ್ಕೊಳಗಾದ ಅನಿತಾ ವಿಧಿ ಇಲ್ಲದೇ ಬೇರೆ ವ್ಯಕ್ತಿಯನ್ನು ಮದುವೆಯಾಗಿದ್ದರು.
ದುರದೃಷ್ಟವಶಾತ್ ಅನಿತಾ ಪತಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದರು. ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಸಾಕಲು ಅನಿತಾ ಸಾಕಷ್ಟು ಪರದಾಡಬೇಕಾಯಿತು. ಬಡತನದಲ್ಲೂ ತನ್ನ ಮಕ್ಕಳಿಬ್ಬರಿಗೆ ಅವರು ಉತ್ತಮ ಶಿಕ್ಷಣವನ್ನು ನೀಡಿದರು.
ಪ್ರೇಮ ವೈಫಲ್ಯದಿಂದ ನೊಂದಿದ್ದ ವಿಕ್ರಮನ್ ಚವರಕ್ಕೆ ಸ್ಥಳಾಂತರವಾಗಿ ರಾಜಕೀಯ ಜೀವನದಲ್ಲಿ ಸಕ್ರಿಯರಾದರು. ಅನಿತಾ ಮಕ್ಕಳಿಬ್ಬರು ಬೆಳೆದು ದೊಡ್ಡವರಾದಾಗ ತಾಯಿಯ ಪ್ರೇಮ ಕಥೆಯ ಬಗ್ಗೆ ತಿಳಿದುಕೊಂಡಿದ್ದಾರೆ. ತಮ್ಮ ತಾಯಿಯ ಪ್ರೇಮಕಥೆಗೆ ಸುಖಾಂತ್ಯ ನೀಡಲು ಅವರು ನಿರ್ಧರಿಸಿದ್ದಾರೆ. ಆದರೆ ಮಕ್ಕಳಿಬ್ಬರ ಮದುವೆಯಾಗುವವರೆಗೂ ಇದಕ್ಕೆಲ್ಲ ಅನುಮತಿ ನೀಡಲು ಅನಿತಾ ಒಪ್ಪಲಿಲ್ಲ.
ಈಗ ಎಲ್ಲ ಜವಾಬ್ದಾರಿಗಳನ್ನು ಮುಗಿಸಿರುವ ತಾಯಿಗೆ ಮಕ್ಕಳಿಬ್ಬರು ವಿಕ್ರಮನ್ ರೂಪದಲ್ಲಿ ಬಹುದೊಡ್ಡ, ಮರೆಯಲಾರದ ಉಡುಗೊರೆಯನ್ನು ನೀಡಿದ್ದಾರೆ- 32 ವರ್ಷಗಳ ಹಿಂದೆ ಬೇರ್ಪಟ್ಟಿದ್ದ ವಿಕ್ರಮನ್ ಅವರ ಕೈ ಹಿಡಿಸುವುದರ ಮೂಲಕ. ಇದೇ ಜುಲೈ 21 ರಂದು ವಿಕ್ರಮನ್ ಮತ್ತು ಅನಿತಾ ಸತಿಪತಿಗಳಾಗಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.