ಕೇರಳ : ದೇಶದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದ ಸಿಎಎ ಯನ್ನು ಕೈಬಿಡಬೇಕೆಂದು ಕೇರಳದ ಸಿಎಂ ಪಿಣರಾಯಿ ವಿಜಯನ್ ರಾಜ್ಯ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವಿಧಾನ ಸಭೆ ಮತ್ತು ಸಂಸತ್ತಿನಲ್ಲಿ ಎಸ್ ಸಿ ಮತ್ತು ಎಸ್ ಟಿಗಳಿಗೆ ಮೀಸಲಾತಿಯನ್ನು ಮತ್ತೊಂದು ದಶಕಗಳವರೆಗೆ ವಿಸ್ತರಿಸುವುದನ್ನು ಅಂಗೀಕರಿಸುವ ಸಲುವಾಗಿ ಒಂದು ದಿನದ ಅಧಿವೇಶನ ಕರೆಯಲಾಗಿತ್ತು. ಈ ವೇಳೆ ಕೇರಳದ ಸಿಎಂ ಪಿಣರಾಯಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವಂತೆ ನಿರ್ಣಯ ಮಂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಸಿಎಎ ದೇಶದ ಜಾತ್ಯಾತೀತ ದೃಷ್ಟಿಕೋನಕ್ಕೆ ವಿರುದ್ಧವಾಗಿದೆ. ಪೌರತ್ವ ನೀಡುವಲ್ಲಿ ಧರ್ಮ ಆಧಾರಿತ ತಾರತಮ್ಯ ಸರಿಯಲ್ಲ. ಈ ಕಾಯ್ದೆ ಸಂವಿಧಾನದ ಮೂಲ ಮೌಲ್ಯಗಳು ಮತ್ತು ತತ್ವಗಳಿಗೆ ವಿರುದ್ಧವಾಗಿದೆ. ಆದ್ದರಿಂದ ಇದನ್ನು ರದ್ದುಗೊಳಿಸಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೇ ಕೇರಳದಲ್ಲಿ ಯಾವುದೇ ಬಂಧನ ಕೇಂದ್ರಗಳು ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.