ಪರೋಕ್ಷ ಯುದ್ಧ ಸಾರುವ ಮೂಲಕ ಜಮ್ಮು ಕಾಶ್ಮಿರವನ್ನು ಸೇರ್ಪಡೆಗೊಳಿಸಬೇಕು ಎನ್ನುವ ಪಾಕಿಸ್ತಾನದ ಹಗಲು ಗನಸು ಹಗಲು ಗನಸಾಗಿಯೇ ಉಳಿಯುತ್ತದೆ ಎಂದು ಕೇಂದ್ರ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ವಿಶ್ವಸಂಸ್ಥೆ 71ನೇ ಮಹಾಧಿವೇಶನದಲ್ಲಿ ಮಾತನಾಡಿರುವ ಸುಷ್ಮಾ ಸ್ವರಾಜ್ ಅವರು, ಭಾರತ ದೇಶದ ಜನತೆ ಕಾಶ್ಮಿರವನ್ನು ರಕ್ಷಿಸಲು ಪಣತೊಟ್ಟಿದ್ದಾರೆ. ಪಾಕಿಸ್ತಾನ ಕಾಶ್ಮಿರದ ಬಗ್ಗೆ ಕನಸು ಕಾಣುವುದು ಬಿಟ್ಟರೆ ಒಳಿತು ಎಂದು ಸಲಹೆ ನೀಡಿದ್ದಾರೆ.
ಭಾರತ ಹಲವಾರು ಬಾರಿ ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆ ನಡೆಸಲು ಪ್ರಯತ್ನಿಸಿದೆ. ಪ್ರತಿಯೊಂದು ಬಾರಿ ಶಾಂತಿ ಮಾತುಕತೆ ನಡೆದಾಗಲೂ ಉಗ್ರರ ದಾಳಿ ನಡೆದಿದೆ. ಜೀವಂತವಾಗಿ ಪಾಕಿಸ್ತಾನದ ಉಗ್ರರನ್ನು ಸೆರೆಹಿಡಿದಾಗಲೂ ಪಾಕ್ ತನ್ನ ತಪ್ಪನ್ನು ಒಪ್ಪಿಕೊಳ್ಳದೆ ಹೇಡಿತನ ಮೆರೆದಿದೆ ಎಂದು ವಾಗ್ದಾಳಿ ನಡೆಸಿದರು.
ಪಾಕಿಸ್ತಾನ ಪಾಕ್ ಆಕ್ರಮಿತ ಕಾಶ್ಮಿರ, ಬಲೂಚಿಸ್ತಾನ್ ಸೇರಿದಂತೆ ಇತರ ಭಾಗಗಳಲ್ಲಿ ತಮ್ಮದೇ ದೇಶದ ನಾಗರಿಕರ ಮೇಲೆ ದೌರ್ಜನ್ಯ ಎಸಗುತ್ತಿದೆ. ಯಾರು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ ಎನ್ನುವುದು ವಿಶ್ವಕ್ಕೆ ಗೊತ್ತಿದೆ ಎಂದರು.
ಕೆಲ ದಿನಗಳ ಹಿಂದಷ್ಟೇ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ , ಉಗ್ರ ಬುರ್ಹಾನ್ ವಾನಿಯೊಬ್ಬ ಯುವ ನಾಯಕನಾಗಿದ್ದ ಎಂದು ಪ್ರಶಂಸಿಸಿದ್ದರು. ನವಾಜ್ ಷರೀಫ್ ಭಾಷಣಕ್ಕೆ ಕೇಂದ್ರ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಸೂಕ್ತ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ