Select Your Language

Notifications

webdunia
webdunia
webdunia
webdunia

ಕಾರ್ಗಿಲ್ ವಿಜಯ್ ದಿವಸಕ್ಕೆ ಇಂದು 25 ವರ್ಷ: ನೀವು ತಿಳಿದುಕೊಳ್ಳಬೇಕಾದ ಅಂಶಗಳು

Kargil Vijay Diwas

Krishnaveni K

ನವದೆಹಲಿ , ಶುಕ್ರವಾರ, 26 ಜುಲೈ 2024 (10:38 IST)
ನವದೆಹಲಿ: ಕಾರ್ಗಿಲ್ ವಿಜಯ್ ದಿವಸಕ್ಕೆ ಇಂದು 25 ವರ್ಷ ತುಂಬುತ್ತಿದೆ. ಕಾಲು ಕೆರೆದುಕೊಂಡು ಯುದ್ಧಕ್ಕೆ ಬಂದಿದ್ದ ನರಿಬುದ್ದಿಯ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿ ಭಾರತದ ವಿಜಯ ಪತಾಕೆ ಹಾರಿಸಿದ ದಿನ. ಇದಕ್ಕಾಗಿ ಪ್ರಾಣ ತ್ಯಾಗ ಮಾಡಿದವರು ಅದೆಷ್ಟೋ ಮಂದಿ.

1999 ರ ಮೇ 3 ರಂದು ಕುರಿಗಾಹಿ ತಾಶಿ ನಾಂಜಿಯಾಲ್ ಎಂಬಾತ ತನ್ನ ಕುರಿ ಹುಡುಕಿಕೊಂಡು ಹೋಗುವಾಗ ಪಾಕಿಸ್ತಾನ ಸೈನಿಕರನ್ನು ಕಂಡಿದ್ದಾರೆ. ಈ ಮಾಹಿತಿಯನ್ನು ಅವರು ಭಾರತೀಯ ಸೇನೆಗೆ ಮಾಹಿತಿ ನೀಡಿದರು. ಆಗಲೇ ಭಾರತೀಯ ಸೇನೆಗೆ ಪಾಕಿಸ್ತಾನ ಸೇನೆ ನುಸುಳುತ್ತಿರುವ ಸುದ್ದಿ ತಿಳಿದಿದ್ದು.

ಮೊದಲು ಸ್ಥಳೀಯ ಸೇನಾ ತಂಡವೊಂದನ್ನು ಪಾಕಿಸ್ತಾನ ಸೈನಿಕರ ಅಡಗುದಾಣವಿರುವ ಸ್ಥಳಕ್ಕೆ ಕಳುಹಿಸಲಾಗಿತ್ತು. ಆದರೆ ಅದಾಗಲೇ ಸಿದ್ಧರಾಗಿದ್ದ ಪಾಕ್ ಸೈನಿಕರು ಐವರು ಭಾರತೀಯ ಯೋಧರನ್ನು ಬಲಿ ತೆಗೆದುಕೊಂಡಿದ್ದರು. ಮೇ 10 ರ ವೇಳೆಗೆ ಪಾಕ್ ಸೈನಿಕರು ಗಡಿ ನಿಯಂತ್ರಣ ರೇಖೆಯೊಳಗೆ ವಿವಿಧೆಡೆಯಿಂದ ನುಗ್ಗಿರುವುದು ತಿಳಿದುಬಂತು. ಇದಾದ ಬಳಿಕ ಭಾರತೀಯ ಸೇನೆ ಸರ್ವ ಸನ್ನದ್ಧವಾಯಿತು.

ಕಾಶ್ಮೀರದಿಂದ ಕಾರ್ಗಿಲ್ ಗೆ ಸೇನೆ ರವಾನಿಸಲಾಯಿತು. ಆಪರೇಷನ್ ವಿಜಯ್ ಕಾರ್ಯಾಚಾರಣೆ ಆರಂಭವಾಯಿತು. ನಮ್ಮ ವಾಯು ಪಡೆ ಕೂಡಾ ಯುದ್ಧ ರಂಗ ಪ್ರವೇಶಿಸಿತು. ಪಾಕ್ ಸೇನೆಯಿಂದಲೂ ಪ್ರತಿ ದಾಳಿ ಶುರುವಾಯಿತು. ಪಾಕ್ ವಾಯು ಪಡೆಯಿಂದಲೂ ಪ್ರತಿ ದಾಳಿ ನಡೆಯಿತು. ಈ ವೇಳೆ ನಮ್ಮ ಎರಡು ವಿಮಾನಗಳನ್ನು ಪಾಕ್ ಹೊಡೆದುರುಳಿಸಿತು. ಫ್ಲೈಟ್ ಲೆಫ್ಟಿನೆಂಟ್ ನಚಿಕೇತ್ ರಾವ್ ಅವರನ್ನು ಪಾಕ್ ಸೇನೆ ವಶಕ್ಕೆ ಪಡೆಯಿತು. ಮೇ 27 ರಂದು ಭಾರತದ ವಾಯುಪಡೆಯ ಮತ್ತೊಂದು ಯುದ್ಧ ವಿಮಾನ ಎಂಐ-17 ರನ್ನು ಪಾಕ್ ಸೇನೆ ಹೊಡೆದುರುಳಿಸಿತು. ಈ ವೇಳೆ ನಾಲ್ವರು ಯೋಧರು ಪ್ರಾಣ ತ್ಯಾಗ ಮಾಡಿದರು.

ವಾಯು ಪಡೆ ದಾಳಿಯಿಂದ ಕಂಗೆಟ್ಟಪಾಕಿಸ್ತಾನ ಕಾಶ್ಮೀರ ಹೆದ್ದಾರಿ ಮೇಲೆ ದಾಳಿ ನಡೆಸಿತು. ಅದುವರೆಗೆ ಪಾಕಿಸ್ತಾನ ಕಾರ್ಗಿಲ್ ಯುದ್ಧವನ್ನು ನಿರಾಕರಿಸುತ್ತಲೇ ಇತ್ತು. ಆದರೆ ತಿರುಗಿಬಿದ್ದ ಭಾರತ ಶತ್ರು ರಾಷ್ಟ್ರವೇ ಮೊದಲು ಯುದ್ಧ ಶುರು ಮಾಡಿರುವುದಾಗಿ ದಾಖಲೆ ಬಿಡುಗಡೆ ಮಾಡಿತು.

ಜೂನ್ 6 ರಿಂದ ಭಾರತೀಯ ಸೇನೆಯ ಯಶಸ್ಸು ಆರಂಭವಾಯಿತು. ಜೂನ್ 9ರಂದು ಕ್ಯಾ. ಮನೋಜ್ ಕುಮಾರ್ ಪಾಂಡೆ ನೇತೃತ್ವದ ತಂಡ ಬಟಾಲಿಕ್ ಸೇನಾ ವಲಯವನ್ನು ಮರು ವಶ ಪಡಿಸಿಕೊಂಡರು. ಜುಬರ್ ಟಾಪ್ ಮತ್ತು ಕುಕರ್ ಶಾಂಗ್ ಗಳನ್ನು ವಶಪಡಿಸಿಕೊಂಡ ಬಳಿಕ ಮನೋಜ್ ಕುಮಾರ್ ಹುತಾತ್ಮರಾದರು. ಅವರನ್ನು ಇಂದಿಗೂ ದೇಶ ನೆನೆಸಿಕೊಳ್ಳುತ್ತದೆ.

ಬಳಿಕ ಪಾಕ್ ನುಸುಳುಕೋರರ ವಶದಲ್ಲಿದ್ದ ದ್ರಾಸ್ ನ ಟೋಲೋ ಲಿಂಗ್ ಪೀಕ್ ವಶಪಡಿಸಿಕೊಳ್ಳಲಾಯಿತು. ಈ ತಂಡದಲ್ಲಿ ಮೇಜರ್ ರಾಜೇಶ್ ಅಧಿಕಾರಿ, ಮೇಜರ್ ವಿವೇಕ್ ಗುಪ್ತಾ. ಪದ್ಮಪಾಣಿ ಆಚಾರ್ಯ ಇದ್ದರು. ಜೂನ್ 15 ರಂದು ಅಮೆರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ಪಾಕ್ ಸೇನೆಗೆ ಕೂಡಲೇ ಸೇನೆ ಹಿಂಪಡೆಯುವಂತೆ ಎಚ್ಚರಿಕೆ ನೀಡಿದರು. ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ದೊರೆಯಿತು.

ಕಾರ್ಗಿಲ್ ಯುದ್ಧದಲ್ಲಿ ಭಾರತೀಯರು ಎಂದೆಂದೂ ಮರೆಯದ ಇನ್ನೊಬ್ಬ ವೀರ ಎಂದರೆ ಕ್ಯಾ. ವಿಕ್ರಮ್ ಬಾತ್ರಾ. ದ್ರಾಸ್ ನಲ್ಲಿರುವ ಎರಡು ಪೀಕ್ ಗಳಾದ ಪಾಯಿಂಟ್ 5140 ವಶಪಡಿಸಿಕೊಳ್ಳುವಲ್ಲಿ ವಿಕ್ರಮ್ ಬಾತ್ರಾ ತಂಡ ಯಶಸ್ವಿಯಾಯಿತು. ಯೇ ದಿಲ್ ಮಾಂಗೆ ಮೋರ್ ಎನ್ನುವ ಹೆಸರಿನಲ್ಲಿ ಈ ಆಪರೇಷನ್ ನಡೆಯಿತು. ಈ ಹೋರಾಟದಲ್ಲಿ ವಿಕ್ರಮ್ ಬಾತ್ರಾ ಹುತಾತ್ಮರಾದರು.

ಜೂನ್ 29 ಕ್ಕೆ ಟೈಗರ್ ಹಿಲ್ ಮರು ವಶಕ್ಕೆ ಭಾರತೀಯ ಸೇನೆ ಕಾರ್ಯಾಚರಣೆ ಶುರು ಮಾಡಿತು. ಅಮೆರಿಕಾ ಒತ್ತಡಕ್ಕೆ ಮಣಿದ ಪಾಕಿಸ್ತಾನ ಸೇನೆ ಮತ್ತು ಉಗ್ರರು ಕಾಶ್ಮೀರದಿಂದ ಹಿಂದೇಟು ಹಾಕಲಾರಂಭಿಸಿದರು. ಸತತ 12 ಗಂಟೆಗಳ ಹೋರಾಟದ ನಂತರ ಜುಲೈ 4 ರಂದು ಟೈಗರ್ ಹಿಲ್ ವಶಕ್ಕೆ ಪಡೆಯಲಾಯಿತು. ಗ್ರೆನೇಡಿಯರ್ಸ್  ನ ಬಲ್ವಾನ್ ಸಿಂಗ್, ಯೋಗೇಂದ್ರ ಸಿಂಗ್ ಯಾದವ್ ಸಾಹಸದಿಂದ ಟೈಗರ್ ಹಿಲ್ ನಮ್ಮದಾಯಿತು.

ಜುಲೈ 7 ರಂದು ಟೈಗರ್ ಹಿಲ್ಸ್ ನಂತೇ ಮತ್ತೊಂದು ಮಹತ್ವದ ಪಾಯಿಂಟ್ ಆದ ಜುಬಾರ್ ಹೈಟ್ಸ್ ನ್ನೂ ಭಾರತ ವಶಕ್ಕೆ ಪಡೆಯಿತು. ಎಲ್ಲಾ ಮಹತ್ವದ ಪಾಯಿಂಟ್ ವಶಪಡಿಸಿಕೊಂಡ ನಂತರ ಭಾರತ ಸೇನೆ ಸಂಪೂರ್ಣ ಮೇಲುಗೈ ಸಾಧಿಸಿತು. ಜುಲೈ 11 ರಂದು ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಆಪರೇಷನ್ ವಿಜಯ್ ಸಕ್ಸಸ್ ಆಗಿದೆ ಎಂದು ಘೋಷಿಸಿದರು.

ಕಾರ್ಗಿಲ್ ಯುದ್ಧದಲ್ಲಿ ಭಾರತ 527 ಯೋಧರನ್ನು ಕಳೆದುಕೊಂಡಿತು. ಕರ್ನಾಟಕದ 13 ಯೋಧರು ಹುತಾತ್ಮರಾಗಿದ್ದರು. ಅತ್ತ ಪಾಕಿಸ್ತಾನ 1200 ಯೋಧರನ್ನು ಭಾರತೀಯ ಸೇನೆ ಕೊಂದು ಹಾಕಿತ್ತು. ಈ ಐತಿಹಾಸಿಕ ಗೆಲುವಿನ ನೆನಪಿಗಾಗಿ ಜುಲೈ 26 ರನ್ನು ಪ್ರತಿವರ್ಷ ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರಾವಳಿಯಲ್ಲಿ ಈಗ ಮಳೆ ಜೊತೆಗೆ ಬಿರುಗಾಳಿ: ಇನ್ನೆಷ್ಟು ದಿನ ಮಳೆ ಇಲ್ಲಿದೆ ಡೀಟೈಲ್ಸ್