ಕಳೆದ ವಾರ ನಡೆದ ದಲಿತ ಕಾನೂನು ವಿದ್ಯಾರ್ಥಿನಿ ಜಿಶಾ ಅತ್ಯಾಚಾರ ಮತ್ತು ಹತ್ಯೆ ಒಂದು ಯೋಜಿತ ಕೃತ್ಯ ಎಂಬಂತೆ ಭಾಸವಾಗುತ್ತಿದೆ. ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.
ತನಿಖೆ ಮಹತ್ವದ ಘಟ್ಟ ತಲುಪಿದ್ದು ಸಾಗುತ್ತಿದ್ದು, ಇದೊಂದು ಯೋಜಿತ ಹತ್ಯೆ. ಆದರೆ ಪೂರ್ವ ನಿಯೋಜಿತ ಅಲ್ಲ ಎಂಬಂತೆ ಗೋಚರಿಸುತ್ತಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಮೇಲ್ವಿಚಾರಣೆ ನಡೆಸುತ್ತಿರುವ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕೆ.ಪದ್ಮಕುಮಾರ್ ಹೇಳಿದ್ದಾರೆ.
ತನಿಖೆ ಸಮರ್ಪಕ ರೀತಿಯಲ್ಲಿ ನಡೆಯುತ್ತಿದೆ ಎಂದಿರುವ ಅವರು, ಬಂಧಿತ ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 125 ಜನರನ್ನು ಪ್ರಶ್ನಿಸಲಾಗಿದೆ. 12 ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.
ಎಪ್ರಿಲ್ 28 ರಂದು ನಡೆದ ಈ ಹತ್ಯೆಯನ್ನು 2012ರ ಡಿಸೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರಕ್ಕೆ ಹೋಲಿಸಲಾಗುತ್ತಿದ್ದು ಯುವತಿಯ ಕುತ್ತಿಗೆ, ಎದೆ ಮತ್ತು ಅನೇಕ ಕಡೆಗಳಲ್ಲಿ 13 ಗಾಯದ ಗುರುತುಗಳು ಮತ್ತು ಕುತ್ತಿಗೆ ಹಿಸುಕಿದ ಗುರುತುಗಳಿವೆ ಎಂದು ಎರ್ನಾಕುಲಮ್ ವಿಭಾಗ ಐಜಿ ಮಹಿಪಾಲ್ ಯಾದವ್ ತಿಳಿಸಿದ್ದಾರೆ. ಆದರೆ ಕೆಲವು ವರದಿಗಳ ಪ್ರಕಾರ ಆಕೆಯ ದೇಹದಲ್ಲಿ 30 ಗಾಯದ ಗುರುತುಗಳಿವೆ.
ಕೇರಳದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ 12 ದಿನಗಳು ಬಾಕಿ ಇದ್ದು ಈ ಬರ್ಬರ ಅತ್ಯಾಚಾರ, ಕೊಲೆ ಪ್ರಕರಣ ಹೆಚ್ಚು ಚರ್ಚೆಗೊಳಪಡುತ್ತಿರುವ ವಿಷಯವಾಗಿ ಮಾರ್ಪಟ್ಟಿದೆ.
ಹತ್ಯೆಗೈಯ್ಯಲ್ಪಟ್ಟ ಯುವತಿಯ ಕುಟುಂಬವನ್ನು ಪ್ರಧಾನಿ ಮೋದಿ ಮೇ 11 ರಂದು ಭೇಟಿ ಮಾಡಲಿದ್ದಾರೆ. ಸಾಮಾಜಿಕ ನ್ಯಾಯ ಖಾತೆ ಸಚಿವ ಥಾವರ್ ಗೆಹ್ಲೋಟ್ ಸಹ ಬಲಿಪಶುವಿನ ಕುಟುಂಬವನ್ನು ಭೇಟಿ ಮಾಡಲಿದ್ದರೆ ಎಂದು ತಿಳಿದು ಬಂದಿದೆ.