ಅಪೋಲೋ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ದಾಖಲಾಗಿದ್ದಾರೆ ಎನ್ನಲಾದ ಮಹಡಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
ಅನಾರೋಗ್ಯದಿಂದ ಬಳಲುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಆತಂಕಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆಯ ಮೂಲಗಳು ಸ್ಪಷ್ಟಪಡಿಸಿವೆ.
ಲಂಡನ್ ಬ್ರಿಡ್ಜ್ ಆಸ್ಪತ್ರೆಯ ರಿಚರ್ಡ್ ಜಾನ್ ಸೇರಿದಂತೆ ಇಂಗ್ಲೆಂಡ್ ಮತ್ತು ಅಮೇರಿಕದಿಂದ ಆಗಮಿಸಿರುವ ತಜ್ಞ ವೈದ್ಯರ ತಂಡ ಅವರ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡುತ್ತಿದೆ.
ಮಾಜಿ ಮುಖ್ಯಮಂತ್ರಿ, ಹಾಲಿ ಹಣಕಾಸು ಸಚಿವ, ಜಯಲಲಿತಾ ಪರಮಾಪ್ತ ಪನೀರ್ ಸೆಲ್ವಂ ಸೇರಿದಂತೆ 10ಕ್ಕೂ ಹೆಚ್ಚು ಸಚಿವರು ಇಂದು ಆಸ್ಪತ್ರೆಗೆ ಭೇಟಿ ನೀಡಿದ್ದು ಸದ್ಯದಲ್ಲಿಯೇ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಜಯಾ ಅವರ ಜತೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಜಯಲಲಿತಾ ಕಳೆದ ಸೆಪ್ಟೆಂಬರ್ 22 ರಂದು ನಿರ್ಜಲೀಕರಣ ಮತ್ತು ಜ್ವರದ ಬಾಧೆಗೊಳಗಾಗಿ ಚೆನ್ನೈನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ಕೆಲವು ದಿನಗಳ ಮಟ್ಟಿಗೆ ಅವರನ್ನು ನಿಗಾವಣೆಯಲ್ಲಿ ಇಡಲಾಗುವುದು ಎಂದು ಆಸ್ಪತ್ರೆ ಸೆಪ್ಟೆಂಬರ್ 23 ರಂದು ಪತ್ರಿಕಾ ಹೇಳಿಕೆಯನ್ನು ನೀಡಿತ್ತು. ಆದರೆ ಅವರ ಆರೋಗ್ಯದ ಕುರಿತಾದ ಯಾವುದೇ ನಂಬಲರ್ಹ ವರದಿಯನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ.
ಆಸ್ಪತ್ರೆ ಅವರ ಆರೋಗ್ಯದ ಕುರಿತಾಗಿ ನಿಯತಕಾಲಿಕವಾಗಿ ಯಾವುದೇ ಸ್ಪಷ್ಟತೆ ಇಲ್ಲದ ಸಾಮಾನ್ಯ ಹೇಳಿಕೆಗಳನ್ನು ನೀಡುತ್ತ ಬಂದಿದೆ. ಅದು ವದಂತಿಗಳಿಗೆ ದಾರಿ ಮಾಡಿಕೊಟ್ಟಿದೆ.
ಅವರು ಅತಿಯಾದ ಮಧುಮೇಹ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೊದಲು ವದಂತಿ ಹರಡಿತ್ತು. ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ ಎಂದು ಸುದ್ದಿ ಹಬ್ಬಿತು. ಬಳಿಕ ಅವರು ಕೋಮಾ ಸ್ಥಿತಿಗೆ ತಲುಪಿದ್ದಾರೆ. ಚೇತರಿಸಿಕೊಳ್ಳುವ ಸಾಧ್ಯತೆಗಳೇ ಇಲ್ಲ ಎಂಬ ವದಂತಿ ಹಬ್ಬಿತು.
ಆದರೆ ಈ ವದಂತಿಗಳನ್ನು ತಳ್ಳಿ ಹಾಕುತ್ತಲೇ ಬಂದಿರುವ ಆಸ್ಪತ್ರೆ ಮೂಲಗಳು ಅವರ ಆರೋಗ್ಯ ಸ್ಥಿರವಾಗಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದ್ದಾರೆ ಎಂದು ಹೇಳುತ್ತ ಬಂದಿದೆ. ಶನಿವಾರ ಆಸ್ಪತ್ರೆಗೆ ಭೇಟಿ ನೀಡಿದ್ದ ತಮಿಳುನಾಡು ರಾಜ್ಯಪಾಲರಾದ ಸಿ. ವಿದ್ಯಾಸಾಗರ್ ರಾವ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವುದಕ್ಕೆ ಸಂತೋಷವನ್ನು ವ್ಯಕ್ತ ಪಡಿಸಿದ್ದಾರೆ.
ಜಯಲಲಿತಾ ದಾಖಲಾಗಿರುವ ಆಸ್ಪತ್ರೆಯ ಮಹಡಿ ವಿಡಿಯೋ ವೈರಲ್