Select Your Language

Notifications

webdunia
webdunia
webdunia
webdunia

ಉಪ ಚುನಾವಣೆಯಲ್ಲಿ ಖಾತೆ ತೆರೆಯದ ʻಜನ್‌ ಸೂರಜ್‌ʼ: ಪ್ರಶಾಂತ್ ಕಿಶೋರ್‌ಗೆ ಬಿಹಾರದಲ್ಲಿ ಭಾರೀ ಮುಖಭಂಗ

Political Strategist Prashant Kishore

Sampriya

ಪಟ್ನಾ , ಭಾನುವಾರ, 24 ನವೆಂಬರ್ 2024 (10:29 IST)
Photo Courtesy X
ಪಟ್ನಾ: ರಾಜಕೀಯ ತಂತ್ರಗಾರ ಪ್ರಶಾಂತ್‌ ಕಿಶೋರ್‌ ನೇತೃತ್ವದ ʻಜನ್‌ ಸೂರಜ್‌ʼ ಪಕ್ಷವು ಈ ಬಾರಿ ಬಿಹಾರ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಖಾತೆ ತೆರೆಯಲು ವಿಫಲವಾಗಿದೆ. ಹೀಗಾಗಿ, ಭಾರೀ ಮುಖಭಂಗ ಅನುಭವಿಸಿದೆ.

ದೇಶದ 14 ರಾಜ್ಯಗಳ 48 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಿತು. ಅದರಂತೆ ಬಿಹಾರದ ತರಾರಿ, ರಾಮಗಢ, ಬೆಳಗಂಜ್ ಮತ್ತು ಇಮಾಮ್‌ಗಂಜ್ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜನ್‌ ಸೂರಜ್‌ ಅಭ್ಯರ್ಥಿಗಳು ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದಾರೆ.  ಚುನಾವಣಾ ತಂತ್ರಗಾರ ಎಂದೇ ಹೆಸರು ಪಡೆದಿದ್ದ ಪ್ರಶಾಂತ್‌ ಕಿಶೋರ್‌ಗೆ ಇದು ಭಾರಿ ಮುಖಭಂಗ ತರಿಸಿದೆ.

ತರಾರ್‌ನಲ್ಲಿ ಜನ್‌ ಸೂರ್ಜ್‌ನಿಂದ ಸ್ಪರ್ಧಿಸಿದ್ದ ಕಿರಣ್ ದೇವಿ ಕೇವಲ 5,622 ಮತಗಳನ್ನು ಪಡೆದು ಬಿಜೆಪಿಯ ಪ್ರತಿಸ್ಪರ್ಧಿ ವಿಶಾಲ್ ಪ್ರಶಾಂತ್ ( ಪಡೆದ ಮತ 78,755) ವಿರುದ್ಧ 73,133 ಮತಗಳ ಅಂತರದಿಂದ ಹೀನಾಯ ಸೋಲು ಕಂಡರು. ರಾಮಗಢದ ಜನ್ ಸೂರಜ್‌ ಅಭ್ಯರ್ಥಿ ಸುಶೀಲ್ ಕುಮಾರ್ ಸಿಂಗ್ 6,513 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಅಶೋಕ್ ಕುಮಾರ್ ಸಿಂಗ್ ವಿರುದ್ಧ 60,895 ಮತಗಳ ಅಂತರದಿಂದ ಸೋತಿದ್ದಾರೆ.

2014ರ ಚುನಾವಣೆಯ ವೇಳೆ ಪ್ರಶಾಂತ್ ಕಿಶೋರ್ ಸಲಹೆಯಂತೆ ಚಾಯ್‍ಪೇ ಚರ್ಚಾ ಬಿಜೆಪಿಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. ಇದಾದ ಬಳಿಕ ಅಮಿತ್ ಶಾ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಪ್ರಶಾಂತ್ ಕಿಶೋರ್ ಬಿಜೆಪಿ ಪಾಳೆಯವನ್ನು ತೊರೆದಿದ್ದರು. ಬಿಹಾರದಲ್ಲಿ ಮಹಾಘಟ್‍ಬಂಧನ್ ಮೈತ್ರಿಕೂಟ ನಡೆಸಿ ನಿತೀಶ್ ಕುಮಾರ್ ಅವರನ್ನು ಪ್ರಶಾಂತ್ ಕಿಶೋರ್ ಗೆಲ್ಲಿಸಿದ್ದರು.

2017ರ ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಪ್ರಶಾಂತ್ ಕಿಶೋರ್ ತಂಡ ಕಾಂಗ್ರೆಸ್‍ನೊಂದಿಗೆ ಕೈಜೋಡಿಸಿತ್ತು. ಆಗಲೂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಎದುರಾಳಿಯನ್ನ ಮಣಿಸಿ ಅಧಿಕಾರ ಹಿಡಿದರು. 2019 ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಗೆ ಯಶಸ್ಸು ಸಿಕ್ಕಿತ್ತು. ಚಂದ್ರಬಾಬು ನಾಯ್ಡು ಅವರನ್ನು ಸೋಲಿಸಿ ವೈಎಸ್‌ಆರ್‌ ಕಾಂಗ್ರೆಸ್‌ನ ಜಗನ್‌ ಅಧಿಕಾರಕ್ಕೆ ಏರಿದ್ದರು.

2018ರಲ್ಲಿ ಜೆಡಿಯು ಸೇರಿದ್ದ ಪ್ರಶಾಂತ್‌ ಕಿಶೋರ್‌ 2022 ರಲ್ಲಿ ಜನ್‌ ಸೂರಜ್‌ ಹೆಸರಿನಲ್ಲಿ ಬಿಹಾರದಲ್ಲಿ ಪಕ್ಷವನ್ನು ಸ್ಥಾಪಿಸಿದ್ದರು. ಮುಂದಿನ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಪ್ರಶಾಂತ್‌ ಕಿಶೋರ್‌ಗೆ ಮೊದಲ ಪ್ರಯತ್ನದಲ್ಲಿ ಸೋಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ 3 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದಿಂದ ನಿರಾಸೆ: ಬಿವೈ ವಿಜಯೇಂದ್ರ