ಜಲಂಧರ್: ಸೋಷಿಯಲ್ ಮೀಡಿಯಾದಲ್ಲಿ ನಕಲಿ ಖಾತೆಗಳನ್ನು ಬಳಸಿ ಯುವಕ/ಯುವತಿ ಹೆಸರಿನಲ್ಲಿ ಚ್ಯಾಟ್ ಮಾಡುವುದು ಬಳಿಕ ವಂಚನೆಯಾಗುವುದು ಹೊಸತೇನಲ್ಲ. ಅಂತಹದ್ದೇ ಘಟನೆಯೊಂದು ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದೆ.
ದೀಪಕ್ ಎಂಬ ಮದುವೆ ವಯಸ್ಸಿನ ಯುವಕನಿಗೆ ಇನ್ ಸ್ಟಾಗ್ರಾಂನಲ್ಲಿ ಯುವತಿಯೊಬ್ಬಳು ಪರಿಚಯವಾಗಿದ್ದಳು. ಆಕೆ ಜೊತೆ ಮೂರು ವರ್ಷ ನಿರಂತರವಾಗಿ ಚ್ಯಾಟ್ ಮಾಡುತ್ತಿದ್ದ. ಕೊನೆಗೊಂದು ದಿನ ಆತನಿಗೆ ಆಕೆಯನ್ನು ಮದುವೆಯಾಗೋಣವೆನಿಸಿತು. ಇದನ್ನೇ ಆಕೆ ಬಳಿ ಹೇಳಿದ್ದ. ಅದರಂತೆ ಆಕೆಯೂ ಒಪ್ಪಿ ಆಕೆಯ ಊರಿನಲ್ಲಿರುವ ಮದುವೆ ಹಾಲ್ ಒಂದರ ಹೆಸರು ಹೇಳಿದ್ದಳು.
ಅದನ್ನುನಂಬಿ ದೀಪಕ್ ತನ್ನ ಬಂಧು ಬಳಗದವರನ್ನು ಒಳಗೊಂಡ 150 ಜನರ ದಿಬ್ಬಣ ಕಟ್ಟಿಕೊಂಡು ಆಕೆ ಹೇಳಿದ ಮದುವೆ ಹಾಲ್ ಹುಡುಕಿಕೊಂಡು ಬಂದಿದ್ದ. ಆದರೆ ಎಲ್ಲಿ ಹುಡುಕಿದರೂ ಮದುವೆ ಹಾಲ್ ಇರಲಿಲ್ಲ, ಹುಡುಗಿಯೂ ಇರಲಿಲ್ಲ. ಆದರೆ ಆತ ಅಷ್ಟಕ್ಕೇ ಸುಮ್ಮನಾಗಲಿಲ್ಲ.
ಇಡೀ ನಗರವನ್ನು ತನ್ನ ದಿಬ್ಬಣದೊಂದಿಗೆ 6 ಗಂಟೆಗಳ ಕಾಲ ಸತತವಾಗಿ ಸುತ್ತಿ ಮದುವೆ ಹಾಲ್ ಹುಡುಕಿದ್ದ. ಎಲ್ಲಿ ಹುಡುಕಿದರೂ ಹಾಲ್ ಸಿಗಲಿಲ್ಲ. ಪಾಪದ ವರ ಬಂದ ದಾರಿಗೆ ಸುಂಕವಿಲ್ಲವೆಂದು ದಿಬ್ಬಣದೊಂದಿಗೆ ತನ್ನ ಮನೆಗೆ ವಾಪಸಾದ. ಆಗಲೇ ಗೊತ್ತಾಗಿದ್ದು ಆತನಿಗೆ ತಾನು ಮೋಸ ಹೋಗಿದ್ದೇನೆಂದು. ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯರ ಹೆಸರಿನಲ್ಲಿ ಚ್ಯಾಟಿಂಗ್ ಮಾಡುವವರು ಇದ್ದೇ ಇರುತ್ತಾರೆ. ಆದರೆ ಇಂತಹ ಮುಗ್ಧರು ಅದನ್ನು ನಂಬಿ ವಂಚನೆಗೊಳಗಾಗುತ್ತಾರೆ.