ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಹೇಳಿಕೆ ನೀಡಿದ್ದ ಬಾಲಿವುಡ್ ನಟ ಅಮಿರ್‌ಖಾನ್ ಅವರ ವಿರುದ್ಧ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಟೀಕಿಸಿದ್ದು, ವಿವಾದದ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಪರಿಕ್ಕರ್ ಬೆಂಬಲಕ್ಕೆ ನಿಂತಿದ್ದಾರೆ.
ಪರಿಕ್ಕರ್ ಹೇಳಿಕೆಗೆ ಇಷ್ಟೆಲ್ಲಾ ಗಲಾಟೆ ಏಕೆ? ಜನ್ಮಭೂಮಿಯನ್ನು ಬೇಷರತ್ ಪ್ರೀತಿಸುವುದು ಹೇಗೆಂದು ನಟನಿಗೆ ತಿಳಿದಿಲ್ಲ. ಹೀಗಾಗಿ ಅವರಿಗೆ ಒಬ್ಬ ಶಿಕ್ಷಕನ ಅಗತ್ಯವಿದೆ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಶನಿವಾರ ಸಿಯಾಚಿನ್ ಎಂಬ ಪುಸ್ತಕದ ಮರಾಠಿ ಅನುವಾದ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಪರಿಕ್ಕರ್, ನಟನೊಬ್ಬ ದೇಶ ಬಿಟ್ಟು ಹೋಗುವುದಾಗಿ ಹೇಳುತ್ತಾರೆ, ಇದು ಉದ್ಧಟತನದ ಹೇಳಿಕೆ. ನನ್ನ ಮನೆ ಕಳಪೆ ಸ್ಥಿತಿಯಲ್ಲಿದ್ದರು, ಚಿಕ್ಕದಾಗಿದ್ದರೂ ನಾನು ನನ್ನ ಮನೆಯನ್ನು ಪ್ರೀತಿಸುತ್ತೇನೆ. ಮನೆ ಎಷ್ಟೇ ಚಿಕ್ಕದಿದ್ದರೂ ಮನೆ ತೊರೆಯುವ ಮಾತನ್ನಾಡದೆ, ಇರುವ ಜಾಗದಲ್ಲೆ ಬಂಗಲೆ ಕಟ್ಟುವ ಕನಸು ಕಾಣಬೇಕು. ಹೀಗೆ ದೇಶದ ವಿರುದ್ಧ ಮಾತನಾಡುವವರಿಗೆ ಜನರೇ ಸರಿಯಾದ ಪಾಠ ಕಲಿಸಬೇಕು ಎಂದು ಹೇಳಿದ್ದರು. ಅಮಿರ್ ಖಾನ್ ಅವರು ಕಳೆದ ನವೆಂಬರ್ನಲ್ಲಿ ತಿಂಗಳಲ್ಲಿ ದೇಶದಲ್ಲಿ ಅಸಹಿಷ್ಣತೆ ಇದೆ ಆದ್ದರಿಂದ ಹೆಂಡತಿ ದೇಶ ತೊರೆಯಲು ಸಲಹೆ ನೀಡಿದ್ದಾಳೆ ಎಂದು ಹೇಳಿ ದೇಶದಾದ್ಯಂತ ಖಂಡನೆಗೆ ಒಳಗಾಗಿದ್ದರು.
ತಮ್ಮ ಅಭಿಪ್ರಾಯಕ್ಕೆ ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗಳು, ಖಂಡನೆ ವ್ಯಕ್ತವಾಗುತ್ತಿದ್ದಂತೆ ನಾನು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವಿರೋಧಿಸಿಲ್ಲ. ನಿರ್ದಿಷ್ಟ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಈ ಮಾತುಗಳನ್ನಾಡಿರಲಿಲ್ಲ. ಆದರೆ ಅಂತಿಮವಾಗಿ ದೇಶವೇ ಸರ್ವೋಚ್ಚ ಎಂದು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದರು.