ತನ್ನ ಮಗಳು ಶೀನಾ ಬೋರಾಳನ್ನು ಹತ್ಯೆಗೈದ ಆರೋಪದ ಮೇಲೆ ಜೈಲು ಪಾಲಾಗಿರುವ ಸುರ ಸುಂದರಿ ಇಂದ್ರಾಣಿ ಮುಖರ್ಜಿ ಈಗ ಹೇಗಿದ್ದಾರೆ ಗೊತ್ತಾ? ನೀವು ನಂಬಲಾಗದಷ್ಟು ಬದಲಾಗಿದ್ದಾಳೆ. ಆಕೆಯ ಲೇಟೆಸ್ಟ್ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
ಹೌದು, ಕಳೆದೊಂದು ವರ್ಷದಿಂದ ಬೈಕುಲ್ಲಾ ಜೈಲಿನಲ್ಲಿ ಬಂಧಿಯಾಗಿರುವ ಇಂದ್ರಾಣಿ, ಒಂದು ದಿನದ ಶರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಂಡು ನಿನ್ನೆ ತಂದೆಯ ತಿಥಿಯಲ್ಲಿ ಪಾಲ್ಗೊಂಡರು.
ಡಿಸೆಂಬರ್ 15 ರಂದು ಇಂದ್ರಾಣಿ ತಂದೆ ಉಪೇಂದ್ರ ಕುಮಾರ್ ಬೋರಾ ಸಾವನ್ನಪ್ಪಿದ್ದು, ಅವರ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಳ್ಳಲು ಗೌಹಾತಿಗೆ ಹೋಗಲು ಅನುಮತಿ ನೀಡುವಂತೆ ಇಂದ್ರಾಣಿ ಡಿಸೆಂಬರ್ 19ರಂದು ಜಾಮೀನಿಗಾಗಿ ಮನವಿ ಸಲ್ಲಿಸಿದ್ದರು.
ಅವರ ಮನವಿಯನ್ನು ಸ್ವೀಕರಿಸಿದ ನ್ಯಾಯಾಧೀಶರಾದ ಹೆಚ್.ಎಸ್.ಮಹಾಜನ್ ಒಂದು ದಿನದ ಜಾಮೀನು ನೀಡಿದ್ದು, ಪೊಲೀಸ್ ಬೆಂಗಾವಲಿನಲ್ಲಿ ಅವರು ಮುಳುಂದ್ನ ಬ್ರಾಹ್ಮಣ ಸೇವಾ ಸಮಿತಿಯಲ್ಲಿ ತಂದೆಯ ತಿಥಿ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದವರು ಆಕೆಯ ಫೋಟೋವನ್ನು ಕ್ಲಿಕ್ಕಿಸಿದ್ದು ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
ತಮ್ಮ ಮಗಳು ಶೀನಾ ಬೋರಾ ಹತ್ಯೆ ಆರೋಪದ ಮೇಲೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಬಂಧನಕ್ಕೊಳಪಟ್ಟಿದ್ದ ಇಂದ್ರಾಣಿ, ಕಳೆದೊಂದು ವರ್ಷದಿಂದ ಬೈಕುಲ್ಲಾ ಜೈಲಿನಲ್ಲಿದ್ದಾರೆ. ಆಕೆಯ ಮೂರನೆಯ ಪತಿ ಪೀಟರ್ ಮುಖರ್ಜಿ ಕೂಡ ಇದೇ ಜೈಲಿನಲ್ಲಿದ್ದಾರೆ.
ತನ್ನ ಎರಡನೆಯ ಪತಿ ಸಂಜೀವ್ ಖನ್ನಾ ಸಹಾಯದಿಂದ ಇಂದ್ರಾಣಿ ಮಗಳು ಶೀನಾ ಬೋರಾಳನ್ನು ಉಸಿರುಗಟ್ಟಿಸಿ ಸಾಯಿಸಿದ್ದಳು ಎಂಬ ಆರೋಪವಿದೆ.