ರೈಲ್ವೇ ಇಲಾಖೆಗೆ ಸೇರಿದ ಆಸ್ತಿಗಳಿಂದ ವಿತ್ತೀಯ ವರ್ಷ 2022ರ ವೇಳೆಗೆ 17,810 ಕೋಟಿ ರೂ.ಗಳನ್ನು ಸಂಗ್ರಹಿಸಲು ರೈಲ್ವೇ ಸಚಿವಾಲಯ ರೂಪುರೇಷೆಗಳನ್ನು ಸಜ್ಜುಗೊಳಿಸಿದೆ.
ಈ ನಿಟ್ಟಿನಲ್ಲಿ 12 ನಿಲ್ದಾಣಗಳನ್ನು ಅಂತಿಮಗೊಳಿಸಲಾಗಿದ್ದು, 5 ನಿಲ್ದಾಣಗಳಿಗೆ ಅದಾಗಲೇ ಯೋಜನೆ ಅನುಷ್ಠಾನವಾಗುವುದು ಬಾಕಿ ಇದೆ. ಮೂರು ನಿಲ್ದಾಣಗಳ ಪ್ರಸ್ತಾವನೆಯನ್ನು ಸಾರ್ವಜನಿಕ-ಖಾಸಗಿ ಪಾಲುದಾರರಿಗೆ ಸಮ್ಮತಿ ಸಮಿತಿ (ಪಿಪಿಪಿಎಸಿ) ಮುಂದೆ ಇಡಲಾಗಿದೆ. ಮಿಕ್ಕ ನಿಲ್ದಾಣಗಳ ಪ್ರಸ್ತಾವನೆಯು ವಿವಿಧ ಹಂತಗಳ ಬೆಳವಣಿಗೆಯಲ್ಲಿ ಇವೆ. ರೈಲ್ವೇಯ ಏಳು ಕಾಲೋನಿಗಳನ್ನು ಈ ವರ್ಷದ ಡಿಸೆಂಬರ್ ವೇಳೆಗೆ ಮರು ಅಭಿವೃದ್ಧಿಗೆಂದು ಕಾಂಟ್ರಾಕ್ಟ್ ನೀಡುವ ಸಾಧ್ಯತೆ ಇದೆ.
ಇದೇ ವೇಳೆ ಖಾಸಗಿ ಪ್ರಯಾಣಿಕ ರೈಲುಗಳನ್ನು ಹಳಿಗೆ ತರಲು ಸಹ ಹೆಜ್ಜೆ ಇಟ್ಟಿರುವ ಸಚಿವಾಲಯವು ಈ ಸಂಬಂಧ ಒಡಂಬಡಿಕೆಗಳನ್ನು ಸಜ್ಜುಗೊಳಿಸುತ್ತಿದೆ. ಈ ವರ್ಷಾರಂಭದಲ್ಲಿ ಖಾಸಗಿ ರೈಲುಗಳನ್ನು ಓಡಿಸುವ ಸಂಬಂಧ ಕರೆಯಲಾಗಿದ್ದ ಬಿಡ್ಗಳಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದವು. ಯೋಜಿತವಾದ 12 ಜಾಲಗಳ ಪೈಕಿ ಎರಡರಲ್ಲಿ ಮೇಲ್ ಹಾಗೂ ಎಕ್ಸ್ಪ್ರೆಸ್ ರೈಲುಗಳ ಸಂಚಾರಕ್ಕೆ ಖಾಸಗಿ ಪಾಲುದಾರರನ್ನು ಆಹ್ವಾನಿಸಿದ್ದ ಸಚಿವಾಲಯಕ್ಕೆ ಕೇವಲ ಎರಡು ಬಿಡ್ಗಳು ಬಂದಿದ್ದವು.
ಗುಡ್ಡಗಾಡಿನಲ್ಲಿರುವ ಮೂರು ರೈಲ್ವೇ ಮಾರ್ಗಗಳಲ್ಲೂ ಖಾಸಗಿ ಪಾಲುದಾರರನ್ನು ಪರಿಚಯಿಸಲು ವ್ಯವಹಾರ ಸಲಹೆಗಾರರನ್ನು ತಿಂಗಳ ಅಂತ್ಯಕ್ಕೆ ನೇಮಕ ಮಾಡಲಾಗುವುದು.