ನವದೆಹಲಿ : ಗಲ್ವಾನ್ನಲ್ಲಿ ಭಾರತೀಯ ಯೋಧರಿಂದ ಪೆಟ್ಟು ತಿಂದಿದ್ದ ಚೀನಾ ಮತ್ತೆ ತನ್ನ ಕುತಂತ್ರ ಬುದ್ಧಿಯನ್ನು ತೋರಿಸಿದೆ. ಅರುಣಾಚಲ ಪ್ರದೇಶದ ಗಡಿ ವಾಸ್ತವ ರೇಖೆ ಬಳಿ ಭಾರತ ಮತ್ತು ಚೀನಾ ಸೈನಿಕರ ಮಧ್ಯೆ ಬಡಿದಾಟ ನಡೆದಿದೆ.
ತವಾಂಗ್ ಸೆಕ್ಟರ್ನಲ್ಲಿ ಡಿಸೆಂಬರ್ 9ರ ರಾತ್ರಿ ಗಡಿ ಕಾಯುತ್ತಿದ್ದ ಭಾರತ ಸೈನಿಕರನ್ನು ಚೀನಿ ಯೋಧರು ಕೆಣಕಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತದ ಸೈನಿಕರು ತಿರುಗೇಟು ನೀಡಿದ್ದು, ಎರಡು ಕಡೆ ಸೈನಿಕರ ಮಧ್ಯೆ ಘರ್ಷಣೆ ನಡೆದಿದೆ. ಘರ್ಷಣೆಯಲ್ಲಿ ಎರಡು ಕಡೆಯಲ್ಲೂ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
ಸಂಘರ್ಷಕ್ಕೆಂದು 300 ಸೈನಿಕರೊಂದಿಗೆ ಚೀನಾ ಪಡೆ ತಯಾರಾಗಿ ಬಂದಿತ್ತು. ದಿಢೀರ್ ದಾಳಿಯಿಂದ ಕ್ಷಣ ಕಾಲ ಭಾರತೀಯ ಸೇನೆ ತಬ್ಬಿಬ್ಬಾದರೂ ತಕ್ಷಣವೇ ಚೇತರಿಸಿಕೊಂಡು ದಿಟ್ಟ ಪ್ರತ್ಯುತ್ತರ ನೀಡಿತು. ಪರಸ್ಪರ ಕಲ್ಲು ತೂರಾಟಗಳು ನಡೆದಿವೆ.
ಭಾರತೀಯರ ಯೋಧರ ಶೌರ್ಯಕ್ಕೆ ಬೆಚ್ಚಿಬಿದ್ದ ಚೀನಾಸೇನೆ, ಸಂಘಷದಿಂದ ಹಿಂದಡಿಯಿಟ್ಟಿದೆ. ಕೊನೆಗೆ ಉಭಯ ಸೇನೆಗಳು ಸಂಘರ್ಷ ಸ್ಥಳವನ್ನು ತೊರೆದಿವೆ. ಗಾಯಗೊಂಡವರ ಪೈಕಿ ಭಾರತೀಯ ಯೋಧರಿಗಿಂತ ಚೀನಾ ಯೋಧರೇ ಜಾಸ್ತಿ ಎಂದು ತಿಳಿದುಬಂದಿದೆ. ಭಾರತ ಸೇನೆಯ ಗಾಯಾಳು ಯೋಧರನ್ನು ಗುವಾಹಟಿಯ ಸೇನಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.