ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಮೇಲೆ ಗಂಭೀರವಾದ ಚರ್ಚೆಗಳು ನಡೆಯುತ್ತಿರುವ ಮಧ್ಯೆ ಜೋಧ್ಪುರದ ಮಹಿಳೆಯೋರ್ವರು ತನ್ನ ಪತಿ ನೀಡಿರುವ ತಲಾಖ್ ವಿರುದ್ಧ ಕೋರ್ಟ್ ಮೆಟ್ಟಿಲೇರಿ ಗಮನ ಸೆಳೆದಿದ್ದಾಳೆ.
ಪತಿಯಿಂದ ಪರಿತ್ಯಕ್ತಳಾಗಿರುವ ಫರ್ಹಾ ಖಾನ್ ತನ್ನ ವಿವಾಹವನ್ನು ಉಳಿಸಿಕೊಳ್ಳಲು ಮಹಿಳಾ ಠಾಣೆಯ ಮೆಟ್ಟಿಲೇರಿದ್ದಾಳೆ ಮತ್ತು ತನ್ನ ಪತಿಯ ಮನೆ ಮುಂದೆ ಪ್ರತಿಭಟನೆಗೆ ಕುಳಿತಿದ್ದಾಳೆ.
ಆಕೆಯ ಪತಿ ಇರ್ಫಾನ್ ಖಾನ್ ಸಿಟ್ಟಿನ ಭರದಲ್ಲಿ ರಸ್ತೆ ಬದಿಯಲ್ಲಿ ಸಾರ್ವಜನಿಕರ ಮುಂದೆ ಮೂರು ಬಾರಿ ತಲಾಖ್ ಹೇಳಿದ್ದ. ಮುಸ್ಲಿಂ ವೈಯಕ್ತಿಕ ಕಾನೂನಿನಂತೆ ಆಕೆಯೊಂದಿಗಿನ 9 ವರ್ಷಗಳ ದೀರ್ಘ ಸಂಬಂಧಕ್ಕೆ ಮೂರು ಶಬ್ಧಗಳ ಉಚ್ಛಾರಣೆಯ ಮೂಲಕ ಕೊನೆ ಹಾಡಿದ್ದ. ಮತ್ತೀಗ ಆಕೆ ತನ್ನ ವೈವಾಹಿಕ ಜೀವನವನ್ನು ಉಳಿಸಿಕೊಡುವಂತೆ ಠಾಣೆಗೆ ಮೊರೆ ಹೋಗಿದ್ದಾಳೆ.
ಆದರೆ ಪತಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಪತ್ನಿ ಫರ್ಹಾ ನನಗೆ ವಿಪರೀತ ಹಿಂಸೆ ನೀಡುತ್ತಿದ್ದಳು. ಅನೇಕ ಬಾರಿ ನನ್ನನ್ನು ಹಿಡಿದು ಥಳಿಸಿದ್ದಾಳೆ. ನಾನಿದನ್ನು ಸಾಬೀತು ಪಡಿಸಬಲ್ಲೆ. ಆಕೆ 1 ವರ್ಷದ ಮಟ್ಟಿಗೆ ಮಗುವನ್ನು ಸಹಿಸಿಕೊಳ್ಳಲಾರಳು. ನಾನು ಆಕೆಯ ಚಿಕಿತ್ಸೆಗೆಂದು 6 ರಿಂದ 7 ಲಕ್ಷ ಚೆಲ್ಲಿದ್ದೇನೆ. ಆಕೆ ತಾಯಿಯಾದರೂ ತನ್ನ ವರ್ತನೆಯಲ್ಲಿ ಬದಲಾವಣೆ ತಂದುಕೊಳ್ಳಲಿಲ್ಲ ಎಂದಾತ ಆರೋಪಿಸಿದ್ದಾನೆ.
ನಾನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ನನ್ನ ಪತಿಯ ಮನೆಯವರು ನನ್ನನ್ನು ದೂರ ತಳ್ಳುತ್ತಿದ್ದಾರೆ. ಮೌಖಿಕ ತಲಾಖ್ ಇಸ್ಲಾಮಿಕ್ ಅಲ್ಲ ಎಂದು ನಾನು ನಂಬುತ್ತೇನೆ. ನಾನು ಪತಿಯೊಂದಿಗೆ ಬದುಕಲು ಇಷ್ಟ ಪಡುತ್ತೇನೆ ಎಂದಾಕೆ ಹೇಳಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ