ಹೊಟ್ಟೆಪಾಡಿಗಾಗಿ ಗಲ್ಫ್ ರಾಷ್ಟ್ರಗಳಿಗೆ ತೆರಳಿ ಸಂಕಷ್ಟಕ್ಕೆ ಸಿಲುಕುವ ಹತ್ತಾರು ಪ್ರಕರಣಗಳನ್ನ ನೋಡಿದ್ದೇವೆ. ಇದೀಗ, ಹೈದ್ರಾಬಾದ್ ಮಹಿಳೆಯೊಬ್ಬರನ್ನ ಕರೆದೊಯ್ದ ಮಹಿಳೆಯನ್ನ ಏಜೆಂಟ್ 3 ಲಕ್ಷಕ್ಕೆ ಮಾರಾಟ ಮಾಡಿದ್ದು, ಖರೀದಿಸಿದ ಮಾಲೀಕ ಕಫೀಲ್, ಮಹಿಳೆಗೆ ದೈಹಿಕ ಹಿಂಸೆ ಕೊಡುತ್ತಿರುವುದು ಬೆಳಕಿಗೆ ಬಂದಿದೆ.
ಬಾಬಾನಗರದ 39 ವರ್ಷದ ಸಲ್ಮಾ ಬೇಗಂ ಎಂಬುವವರು ಏಜೆಂಟ್`ಗಳಾದ ಅಕ್ರಂ ಮತ್ತು ಶಫಿ ಮೂಲಕ ಹೌಸ್ ಮೇಡ್ ವೀಸಾ ಪಡೆದು ಜನವರಿ 21, 2017ರಂದು ಸೌದಿಗೆ ತೆರಳಿದ್ದರು.
ಈ ಬಗ್ಗೆ ಮಾಧ್ಯಮಗಳಿಗೆ ತಿಳಿಸಿರುವ ಸಲ್ಮಾ ಪುತ್ರಿ ಸಮೀನಾ, ಅಕ್ರಮ್ ಮತ್ತು ಶಫಿ ನನ್ನ ತಾಯಿಯನ್ನ ವಂಚಿಸಿದ್ದಾರೆ. ಸೌದಿಯಲ್ಲಿ ನನ್ನ ತಾಯಿ ಕಷ್ಟದಲ್ಲಿದ್ದಾರೆ. ಮಾಲೀಕ ಕಫೀಲ್ ತಾಯಿ ವಾಪಸ್ ಬರಲು ಬಿಡುತ್ತಿಲ್ಲ. ಅಕ್ರಂನನ್ನ ಭೇಟಿಯಾಗಿ ನನ್ನ ತಾಯಿಯನ್ನ ವಾಪಸ್ ಕರೆತರುವಂತೆ ಗೋಗರೆದರೂ ಯಾವುದೇ ಪ್ರಯೋಜನವಾಗಿಲ್ಲ. ಕಂಚನ್ ಬಾಗ್ ಪೊಲೀಸರು ನಮ್ಮ ನೆರವಿಗೆ ಬರಲಿಲ್ಲ. ಕಫೀಲ್`ಗೆ ನನ್ನ ತಾಯಿಯನ್ನ 3 ಲಕ್ಷಕ್ಕೆ ಮಾರಿರುವುದಾಗಿ ತಿಳಿದು ಬಂದಿದೆ. ಕಫೀಲ್ ನನ್ನ ತಾಯಿಯನ್ನ ಒಪ್ಪಂದದ ಮದುವೆಗೆ ಒತ್ತಾಯಿಸಿದ್ದು, ಅದನ್ನ ವಿರೋಧಿಸಿದಕ್ಕೆ ಹಿಂಸೆ ಕೊಡುತ್ತಿದ್ದಾನೆ ಎಂದು ಸಮೀನಾ ಆರೋಪಿಸಿದ್ದಾಳೆ.
ನನ್ನ ತಾಯಿ ಅವಳಿಗಾಗುತ್ತಿರುವ ಹಿಂಸೆ ಬಗ್ಗೆ ಮೆಸೇಜ್ ಮೂಲಕ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದಾಗ ಅಕ್ರಂನನ್ನ ಕರೆಸಿ ವಿಚಾರಿಸಿದ್ದಾರೆ. ಆದರೆ, ಏನೂ ಪ್ರಯೋಜನವಾಗಿಲ್ಲ ಎಂದು ಸಮೀನಾ ಆರೋಪಿಸಿದ್ದಾಳೆ.
ರಾಷ್ಟ್ರೀಯ ದಿನಪತ್ರಿಕೆಯ ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್, ಪ್ರಕರಣ ನನ್ನ ಗಮನಕ್ಕೆ ಬಂದಿದ್ದು, ಸಲ್ಮಾರನ್ನ ರಕ್ಷಿಸಿ ಭಾರತಕ್ಕೆ ಕರೆತರುವಂತೆ ಸೌದಿಯ ರಾಯಭಾರಿಗೆ ಆದೇಶಿಸಿರುವುದಾಗಿ ಟ್ವಿಟ್ ಮಾಡಿದ್ದಾರೆ.