ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ ಮಧ್ಯಂತರ ಬಜೆಟ್ ಘೋಷಣೆ ಮಾಡಿದ್ದು ಮಹಿಳೆಯರಿಗಾಗಿ ಲಕ್ ಪತಿ ದೀದಿ ಯೋಜನೆ ಘೋಷಣೆ ಮಾಡಿದ್ದರು. ಹಾಗೆಂದರೆ ಏನು? ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರ ಇಲ್ಲಿದೆ.
ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದುವರೆಗೆ 1 ಕೋಟಿ ಮಹಿಳೆಯರು ಲಕ್ ಪತಿ ದೀದಿ ಯೋಜನೆಯ ಲಾಭ ಪಡೆದಿದ್ದಾರೆ ಎಂದಿದ್ದಾರೆ. ಇನ್ನೂ 3 ಕೋಟಿ ಮಹಿಳೆಯರಿಗೆ ಯೋಜನೆಯನ್ನು ತಲುಪಿಸುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ. ಹಾಗಿದ್ದರೆ ಸ್ಕೀಮ್ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಲಕ್ ಪತಿ ದೀದಿ ಎಂದರೇನು?
ಮಹಿಳಾ ಸ್ವಯಂ ಸ್ವಸಹಾಯ ಗುಂಪುಗಳೊಂದಿಗೆ ಸಂಪರ್ಕದಲ್ಲಿರುವ 9 ಕೋಟಿ ಮಹಿಳೆಯರಿದ್ದಾರೆ. ಸ್ವಸಹಾಯ ಗುಂಪುಗಳ ಸಹಾಯ ಪಡೆದು ಇವರೆಲ್ಲರೂ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ತಮ್ಮದೇ ಸಣ್ಣ ಮಟ್ಟಿನ ಉದ್ಯಮ ನಡೆಸುತ್ತಾರೆ. ಈ ಸ್ವಸಹಾಯ ಗುಂಪುಗಳಿಗೆ ಸಂಬಂಧಪಟ್ಟಂತೆ ಮತ್ತು ಇವುಗಳ ಮೂಲಕ ಮಹಿಳೆಯರ ಆದಾಯ ಹೆಚ್ಚಿಸಲು ಲಕ್ ಪತಿ ದೀದಿ ಯೋಜನೆ ಜಾರಿಗೆ ತರಲಾಗಿದೆ. ಲಕ್ ಪತಿ ದೀದಿ ಎಂದರೆ ಸ್ವಾವಲಂಬಿಯಾಗಿ ಬದುಕುತ್ತಿರುವ ಮಹಿಳೆಯ ವಾರ್ಷಿಕ ಆದಾಯ 1 ಲಕ್ಷ ರೂ. ಇರುತ್ತದೆ ಎಂದಾಗಿದೆ. ಯೋಜನೆಯ ಪ್ರಯೋಜನಗಳು
ಸ್ವಸಹಾಯ ಗುಂಪುಗಳ ನೆರವಿನಿಂದ ಮಹಿಳೆಯರು ಸಣ್ಣ ಪುಟ್ಟ ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯುತ್ತಾರೆ. ಅಂತಹ ತಾಂತ್ರಿಕ ಕೆಲಸಗಳಲ್ಲಿ ತೊಡಗಿಸಿಕೊಂಡು ತಮ್ಮ ಸಂಪಾದನೆಗೆ ದಾರಿ ಕಂಡುಕೊಳ್ಳುತ್ತಾರೆ. ಕೇವಲ ಕೌಶಲ್ಯ ತರಬೇತಿ ಮಾತ್ರವಲ್ಲ, ಸಣ್ಣ ಉದ್ದಿಮೆಯಲ್ಲಿ ತೊಡಗಿಸಿಕೊಳ್ಳಲು ಆರ್ಥಿಕ ತಿಳುವಳಿಕೆ ನೀಡಲಾಗುತ್ತದೆ. ಆದರೆ ಈ ಯೋಜನೆಯ ಫಲಾನುಭವಿಗಳಾಗಲು ಬಯಸುವ ಮಹಿಳೆಯರು ಯಾವುದಾದರೂ ಸ್ವ ಸಹಾಯ ಗುಂಪಿನ ಭಾಗವಾಗಿರಬೇಕು. ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ
ಯೋಜನೆ ಬಗ್ಗೆ ಮಾಹಿತಿ ಪಡೆಯಲು ನಿಮ್ಮ ಪಕ್ಕದ ಅಂಗನವಾಡಿ ಕೇಂದ್ರಗಳಲ್ಲಿ ವಿಚಾರಿಸಿ. ಇದಕ್ಕೆ ಆಧಾರ್ ಕಾರ್ಡ್, ಆದಾಯ ಸರ್ಟಿಫಿಕೇಟ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳು ಬೇಕಾಗುತ್ತದೆ.