Publish Date: Sat, 10 Jun 2017 (15:21 IST)
Updated Date: Sat, 10 Jun 2017 (15:28 IST)
ಬದ್ರಿನಾಥ್: ಯಾತ್ರಾಸ್ಥಳ ಬದ್ರಿನಾಥ್ ನಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿದ್ದು, ಘಟನೆಯಲ್ಲಿ ಓರ್ವ ಇಂಜಿನಿಯರ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಚಾಪರ್ ನಲ್ಲಿ ಒಟ್ಟು 8 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇದರಲ್ಲಿ ಐವರು ಪ್ರಯಾಣಿಕರು, ಇಬ್ಬರು ಪೈಲಟ್ ಗಳು ಹಾಗೂ ಓರ್ವ ಇಂಜಿನಿಯರ್ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ ಹೆಲಿಕಾಪ್ಟರ್‌ನ ಇಂಜಿನಿಯರ್ ಮೃತಪಟ್ಟರೆ, ಇಬ್ಬರು ಪೈಲಟ್ ಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತ ಇಂಜಿನಿಯರ್ ನನ್ನು ಅಸ್ಸಾಂನ ವಿಕ್ರಮ್ ಲಾಂಬಾ ಎಂದು ಗುರುತಿಸಲಾಗಿದೆ.
ಸೇನಾ ಮೂಲಗಳ ಪ್ರಕಾರ ಪತನವಾದ ಚಾಪರ್ ಕ್ರೆಸ್ಟಾಲ್ ಏವಿಯೇಷನ್ ಗೆ ಸೇರಿದ್ದು, ಆಗಸ್ಟಾ 119 ಸರಣಿಯ ಹೆಲಿಕಾಪ್ಟರ್ ಆಗಿದೆ ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್ ಬಿದ್ದ ರಭಸಕ್ಕೆ ಚಾಪರ್ ನ ರೆಕ್ಕೆಗಳು ತುಂಡರಿಸಿದ್ದು, ಕಾಪ್ಟರ್ ಪ್ರಮುಖ ಭಾಗಗಳು ಜಖಂಗೊಂಡಿವೆ. ಇನ್ನು ಐವರು ಪ್ರಯಾಣಿಕರು ಪವಾಡ ಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ.