ನವದೆಹಲಿ : ಕೇಂದ್ರದ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಬುಧವಾರದಿಂದ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.
ಸೋಮವಾರ ಯೋಜನೆ ವಿರುದ್ಧ ಕೆಲವು ಸಂಘಟನೆಗಳು ಭಾರತ್ ಬಂದ್ಗೆ ಕರೆ ನೀಡಿದ್ದು, ದೆಹಲಿ-ಗುರುಗ್ರಾಮ ಎಕ್ಸ್ಪ್ರೆಸ್ಸ್ ವೇ ನಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
ಅಗ್ನಿಪಥ್ ಯೋಜನೆಯನ್ನು ಕೇಂದ್ರ ರದ್ದು ಮಾಡುವಂತೆ ಹಲವು ಸಂಘಟನೆಗಳು ಒತ್ತಾಯಿಸಿ ಬಂದ್ಗೆ ಕರೆ ನೀಡಿದ್ದು, ಈ ಹಿನ್ನೆಲೆ ಶಾಂತಿಯನ್ನು ಕಾಪಾಡಲು ಪೊಲೀಸರು ಸರ್ಹೌಲ್ ಗಡಿ ಸಮೀಪ ಎಕ್ಸ್ಪ್ರೆಸ್ ವೇನಲ್ಲಿ ವಾಹನ ತಪಾಸಣೆ ಕೈಗೊಂಡಿದ್ದಾರೆ. ಈ ಕಾರಣ ಒಂದೇ ಕಡೆ ಭಾರೀ ವಾಹನಗಳ ರಾಶಿ ಕಂಡುಬಂದಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.
ಇಂದು ದೆಹಲಿಯ ಜಂತರ್ ಮಂತರ್ನಲ್ಲಿ ಅಗ್ನಿಪಥ್ ಯೋಜನೆ ವಿರೋಧಿಸಿ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಪ್ರತಿಭಟನೆಯನ್ನು ಆಯೋಜಿಸಿವೆ.