ನವದೆಹಲಿ: ಬಿಹಾರ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಪಕ್ಷ ಹಾಗೂ ಕುಟುಂಬವನ್ನು ತ್ಯಜಿಸುತ್ತೇನೆಂದು ಘೋಷಿಸಿದ ಲಾಲು ಪ್ರಸಾದ್ ಪುತ್ರಿ ರೋಹಿಣಿ ಇದೀಗ ಹೊಸ ಆರೋಪವನ್ನು ಮಾಡಿದ್ದಾರೆ.
ಇದೀಗ ಇಂದು ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ತಮ್ಮ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ತನ್ನ ಕುಟುಂಬ ಸದಸ್ಯರಿಂದ ಅವಮಾನಿಸಲಾಗಿದೆ, ನಿಂದನೆ ಮತ್ತು ಬೆದರಿಕೆ ಹಾಕಲಾಗಿದೆ ಎಂದು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ರೋಹಿಣಿ ತಾನು "ಅವಮಾನಕ್ಕೊಳಗಾಗಿದ್ದೇನೆ," "ದುರುಪಯೋಗಪಡಿಸಿಕೊಂಡಿದ್ದೇನೆ" ಮತ್ತು ಚಪ್ಪಲಿಯಿಂದ ಹೊಡೆಯುವ ಬೆದರಿಕೆಯನ್ನು ಸಹ ಎದುರಿಸಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
ನಾನು ನನ್ನ ತಂದೆಗೆ ಮೂತ್ರಪಿಂಡವನ್ನು ನೀಡುವುದಕ್ಕೆ ಕೋಟ್ಯಂತರ ರೂಪಾಯಿ ಹಣ ತೆಗೆದುಕೊಂಡಿದ್ದೇನೆ ಎಂದು ಆರೋಪಿಸಿ ನನ್ನನ್ನು ಕೊಳಕು ಎಂದು ನಿಂದಿಸಲಾಗಿದೆ.
ಮದುವೆಯಾದ ಎಲ್ಲಾ ಹೆಣ್ಣುಮಕ್ಕಳು ಮತ್ತು ಸಹೋದರಿಯರಿಗೆ ನಾನು ಒಂದು ಮಾತನ್ನು ಹೇಳಲು ಬಯಸುತ್ತೇನೆ. ನಿಮ್ಮ ಕುಟುಂಬವನ್ನು ನೋಡಿಕೊಳ್ಳಿ, ನಿಮ್ಮ ಮಕ್ಕಳು, ನಿಮ್ಮ ಅತ್ತೆ-ಮಾವಂದಿರನ್ನು ನೋಡಿಕೊಳ್ಳಿ, ನಿಮ್ಮ ಹೆತ್ತವರ ಬಗ್ಗೆ ಚಿಂತಿಸದೆ, ನಿಮ್ಮ ಬಗ್ಗೆ ಯೋಚಿಸಿ.
ನಾನು ಮೂತ್ರಪಿಂಡ ನೀಡುವಾಗ ನನ್ನ ಕುಟುಂಬ, ನನ್ನ ಮೂವರು ಮಕ್ಕಳು, ನನ್ನ ಗಂಡ ಅಥವಾ ನನ್ನ ಅತ್ತೆ-ಮಾವನ ಅನುಮತಿ ಪಡೆಯದೆ ನಾನು ದೊಡ್ಡ ತಪ್ಪು ಮಾಡಿದ್ದೇನೆ. ನೀವೆಲ್ಲರೂ ನನ್ನಂತೆ ತಪ್ಪು ಮಾಡಿಬೇಡಿ, ನನ್ನಂತಹ (ರೋಹಿಣಿ) ಹೆಣ್ಣು ಮಗಳು ಯಾವುದೇ ಮನೆಯಲ್ಲಿ ಇರಬಾರದು ಎಂದು ರೋಹಿಣಿ ಆಚಾರ್ಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. <>