ಮುಂಬೈ ದಾಳಿ ರೂವಾರಿ, ಜಮಾತ್ ಉಲ್ ದವಾ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್, ಭಾರತಕ್ಕೆ ಬುದ್ಧಿ ಕಲಿಸಲು ಸೇನೆಯನ್ನು ಕಾಶ್ಮೀರಕ್ಕೆ ಕಳುಹಿಸಿ ಎಂದು ಪಾಕ್ ಸೇನಾ ಮುಖ್ಯಸ್ಥ ರಾಹೀಲ್ ಷರೀಫ್ ಬಳಿ ಕೇಳಿದ್ದಾನೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
'ಡಿಫೆನ್ಸ್ ಕೌನ್ಸಿಲ್ ಆಫ್ ಪಾಕಿಸ್ತಾನ' ಬ್ಯಾನರ್ ಅಡಿಯಲ್ಲಿ ಕರಾಚಿಯಲ್ಲಿ ನಡೆದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನ್ನಾಡುತ್ತಿದ್ದ ಆತ, ನಾವು ಪಾಕಿಸ್ತಾನದಲ್ಲಿಯೇ ಇರಲು ಬಯಸುತ್ತೇವೆ ಎಂದು ಪ್ರತ್ಯೇಕವಾಗುವುದಕ್ಕೆ ಮೊದಲೇ ಕಾಶ್ಮೀರಿಗಳು ಘೋಷಿಸಿದ್ದರು. ಆದರೆ ಇಬ್ಭಾಗವಾದ ನಂತರ ಭಾರತ ಒತ್ತಾಯ ಪೂರ್ವಕವಾಗಿ ಸೈನ್ಯವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಿತು. ಕಾಶ್ಮೀರಕ್ಕೆ ಸೈನಿಕರನ್ನು ಕಳುಹಿಸುವಂತೆ ಮೊದಮ್ಮದ್ ಅಲಿ ಜಿನ್ನಾ ಅವರು ಆಗಿನ ಕಮಾಂಡರ್- ಇನ್-ಚೀಪ್‌ಗೆ ಆದೇಶಿಸಿದ್ದರು. ಆದರೆ ಅವರ ಆದೇಶವನ್ನು ಪಾಲಿಸಲಾಗಲಿಲ್ಲ. ಈಗ ನಾನು ಜನರಲ್ ರಾಹೀಲ್ ಷರೀಫ್ ಅವರ ಬಳಿ ಕಾಶ್ಮೀರಕ್ಕೆ ಸೈನಿಕರನ್ನು ಕಳುಹಿಸುವಂತೆ ಕೇಳುತ್ತಿದ್ದೇನೆ ಎಂದು ಹೇಳಿದ್ದಾನೆ.
ನಾನು ಭಾರತದ ವಿರುದ್ಧ ಯುದ್ಧ ಮಾಡಲು ಹೇಳುವುದಿಲ್ಲ. ಆದರೆ ಅವರು (ಪ್ರಧಾನಿ ನವಾಜ್ ಶರೀಫ್ ಮತ್ತು ರಾಹೀಲ್) ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯತಂತ್ರವನ್ನು ರೂಪಿಸಬೇಕು ಎಂದಿದ್ದಾನೆ ಆತ.
ನಿಮ್ಮ ಮೌನವನ್ನು ಮುರಿದು ಕಾಶ್ಮೀರ ಮತ್ತು ಬಲೂಚಿಸ್ತಾನದ ಕುರಿತು ಪ್ರಧಾನಿ ಮೋದಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ ಎಂದಾತ ಪಾಕ್ ಪ್ರಧಾನಿಗೆ ಹೇಳಿದ್ದಾನೆ.
ಪಾಕಿಸ್ತಾನ ಯುದ್ಧ ವಲಯವಾಗಿ ಬದಲಾಗಿದೆ. ಕಾಶ್ಮೀರಿಗಳು ಸಾಯುತ್ತಿದ್ದಾರೆ. ಮೋದಿ ಬಲೂಚಿಸ್ತಾನವನ್ನು ಪ್ರತ್ಯೇಕಿಸುವ ಮಾತನ್ನಾಡುತ್ತಿದ್ದಾರೆ. ಯಾಕೆ ನಮ್ಮ ಪ್ರಧಾನಿ ಸುಮ್ಮನಿದ್ದಾರೆ. ಅದೇ ರೀತಿಯಲ್ಲಿ ಪ್ರತ್ಯುತ್ತರವನ್ನು ನೀಡುತ್ತಿಲ್ಲವೇಕೆ ಎಂದಾತ ಪ್ರಶ್ನಿಸಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .