Publish Date: Tue, 28 Feb 2017 (13:40 IST)
Updated Date: Tue, 28 Feb 2017 (13:43 IST)
ಆಕೆಯ ಕೈಗೆ ಹಚ್ಚಿರುವ ಮೆಹಂದಿ ವಾಸನೆ ಸಹ ಇನ್ನು ಹಸಿಯಾಗಿಯೇ ಇದೆ. ಹೊಸ ಜೀವನದ ಹೊಂಗನಸ್ಸು ಕಂಡು ಪತಿಯ ಮನೆ ತಲುಪಿದ್ದ ಆ ಸುಂದರ ಯುವತಿ ಮೊದಲ ರಾತ್ರಿಯಂದು ಆತನ ಜತೆಗೆ ತೆಗೆದುಕೊಂಡು ಸೆಲ್ಫಿಯೇ ತಮ್ಮಿಬ್ಬರ ಜೀವನದ ಕೊನೆಯ ಸೆಲ್ಫಿ ಎಂದು ಕಲ್ಪಿಸಿಯೂ ಇರಲಾರಳು. ಮರುದಿನದ ಮುಂಜಾವು ಆಕೆಯ ಪಾಲಿಗೆ ಹೊಸ ಜೀವನದ ಮುನ್ನುಡಿಯಾಗಿ ಬರಲಿಲ್ಲ. ಬದಲಾಗಿ ಆಕೆಯ ಸುಂದರ ಕನಸು ಚಿಗುರುವ ಮೊದಲೇ ಚಿರನಿದ್ರೆಗೆ ಜಾರಿತ್ತು.
ಹರಿಯಾಣದಲ್ಲೊಂದು ಹೃದಯ ಕಲಕುವ ಘಟನೆ ನಡೆದಿದೆ. ಮದುವೆಯಾದ 8 ಗಂಟೆಯ ಬಳಿಕ ಮದುಮಗ ಸಾವನ್ನಪ್ಪಿದ್ದಾನೆ. ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿಗ ಸೂತಕದ ವಾತಾವರಣ. ಖುಷಿಯ ಕೇಕೆ ಹಾಕುತ್ತಿದ್ದವರಿಂದ ನಿಲ್ಲದ ಆಕ್ರಂದನ.
ದೊರೆತಿರುವ ಮಾಹಿತಿಗಳ ಪ್ರಕಾರ ಗಾಂವ್ ಬಾದಲಿಯಲ್ಲಿ ವಾಸವಾಗಿರುವ ಶಾಹಿದ್ ಖಾನ್ ಫೆಬ್ರವರಿ 26 ರಂದು ಜಮ್ಶೀದಾ ಜತೆ ವಿವಾಹವಾಗಿದ್ದ. ಸಂತೋಷದಿಂದಿದ್ದ ಜೋಡಿ ಮೊದಲ ರಾತ್ರಿಯನ್ನು ಮಧುರವಾಗಿ ಕಳೆದಿತ್ತು. ಆದರೆ ಮರುದಿನ ತನ್ನ ಪಾಲಿಗೆ ಕೊನೆಯ ದಿನ ದಿನವೆಂಬುದನ್ನು ಆತ ಕಲ್ಪಿಸಿರಲಿಲ್ಲ.
ಫೆಬ್ರವರಿ 27ರ ಮುಂಜಾನೆ ವಿದ್ಯುತ್ ತಗುಲಿ ಶಾಹಿದ್ ಮೃತಪಟ್ಟಿದ್ದಾನೆ.
ಮತ್ತೀಗ ಮದುವೆ ಮನೆ ಮಸಣವಾಗಿ ಬದಲಾಗಿದ್ದು ಆಂಕ್ರದನ ಮುಗಿಲುಮುಟ್ಟಿದೆ. ತನ್ನ ಪತಿಯ ಜತೆಗೆ ತೆಗೆದುಕೊಂಡ ಕೊನೆಯ ಸೆಲ್ಫಿಯನ್ನು ನೋಡುತ್ತ ಮದುಮಗಳು ರೋಧಿಸುತ್ತಿರುವುದು ಹೃದಯವನ್ನು ಹಿಂಡುವಂತಿದೆ.
ಸಂಪೂರ್ಣ ಗ್ರಾಮದಲ್ಲಿ ಶೋಕ ಆವರಿಸಿದ್ದು ವಿಧಿಯ ಮುಂದೆ ನಾವೆಲ್ಲ ಲೆಕ್ಕಕ್ಕಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.