ರಾಜ್ಯ ಆರ್‌ಎಸ್ಸೆಸ್ ಅಧ್ಯಕ್ಷ ಸುಭಾಷ್ ವೆಲಿಂಗ್‌ಕರ್ ಅವರನ್ನು ವಜಾ ಮಾಡಿದ್ದನ್ನು ಪ್ರತಿಭಟಿಸಿ ರಾಜೀನಾಮೆ ಪ್ರಕಟಿಸಿದ ತನ್ನ ಘಟಕದ 400ಕ್ಕೂ ಹೆಚ್ಚು ಕಾರ್ಯಕರ್ತರಿಗೆ ಆರ್‌ಎಸ್ಸೆಸ್ ಕಟುವಾದ ಎಚ್ಚರಿಕೆಯನ್ನು ನೀಡಿದೆ.
ಆರ್‌ಎಸ್ಸೆಸ್‌ನ ಯಾವುದೇ ಘಟಕವು ತಾನೇತಾನಾಗಿ ವಿಸರ್ಜನೆಯಾಗುವುದಿಲ್ಲ ಎಂದು ಆರ್‌ಎಸ್ಸೆಸ್ ವಕ್ತಾರ ಮನಮೋಹನ್ ವೈದ್ಯ ತಿಳಿಸಿದರು. ಗೋವಾ ಘಟಕ ಕಾರ್ಯನಿರ್ವಹಿಸಲಿದ್ದು, ಸದ್ಯದಲ್ಲೇ ಹೊಸ ಪದಾಧಿಕಾರಿಗಳನ್ನು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.
ಆರ್‌ಎಸ್ಸೆಸ್ ರಾಜ್ಯ ಘಟಕದ ಸದಸ್ಯರು ಬಂಡಾಯದ ಬಾವುಟ ಹಾರಿಸಿರುವುದು ಇದು ಮೊದಲ ಬಾರಿಯಾಗಿದೆ. ಪರಿಕ್ಕರ್ ಮತ್ತು ಗೋವಾ ಬಿಜೆಪಿ ಮುಖಂಡರ ಜತೆ ಜಟಾಪಟಿಗೆ ಇಳಿದಿದ್ದ ವೆಲಿಂಗ್‌ಕರ್ ಅವರನ್ನು ವಜಾ ಮಾಡಿದ ಕುರಿತು ಸಭೆ ನಡೆಸಿದ ಕಾರ್ಯಕರ್ತರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು.
ಕೊಂಕಣಿ ಮತ್ತು ಮರಾಠಿ ಭಾಷೆಗಳಿಗಿಂತ ಇಂಗ್ಲಿಷ್ ಭಾಷೆಗೆ ಹೆಚ್ಚು ಉತ್ತೇಜನ ನೀಡುವ ಗೋವಾದ ಬಿಜೆಪಿ ಸರ್ಕಾರದ ಕ್ರಮವನ್ನು ವೆಲಿಂಗ್‌ಕರ್ ಟೀಕಿಸಿದ್ದರು. ಬಿಜೆಪಿ ನಾಯಕರ ಜತೆ ವೆಲಿಂಗ್‌ಕರ್ ಸುದೀರ್ಘ ಜಟಾಪಟಿಯ ಬಳಿಕ ಅವರನ್ನು ವಜಾ ಮಾಡುವ ಆರ್‌ಎಸ್ಸೆಸ್ ನಿರ್ಧಾರ ಹೊರಬಿದ್ದಿದೆ. ಮುಂದಿನ ವರ್ಷ ಗೋವಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಹೊಸ ರಾಜಕೀಯ ಪಕ್ಷವೊಂದಕ್ಕೆ ಬೆಂಬಲಿಸುವುದಾಗಿ ವೆಲಿಂಗ್‌ಕರ್ ಬೆದರಿಕೆ ಹಾಕಿದ್ದರು.