ಗೋವಾದಲ್ಲಿ ಶಾಸಕನಿಂದ ನಡೆದಿದೆ ಎನ್ನಲಾದ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೆಯ ಆರೋಪಿ ಕೂಡ ಪೊಲೀಸರಿಗೆ ಶರಣಾಗಿದ್ದಾಳೆ.
ಘಟನೆ ಬೆಳಕಿಗೆ ಬಂದಾಗಿನಿಂದ ತಲೆ ಮರೆಸಿಕೊಂಡಿದ್ದ ರೋಸಿ ಫೆರ್ರೋಸ್ ಇಂದು ಮುಂಜಾನೆ ಪೊಲೀಸರಿಗೆ ಶರಣಾಗಿದ್ದಾಳೆ.
ಬಂಧಿತ ಆರೋಪಿಯಿಂದ ಮಹತ್ವದ ಸಾಕ್ಷ್ಯಗಳನ್ನು ಪಡೆದುಕೊಳ್ಳಲಾಗಿದೆ. ಪೀಡಿತಳ ಮೊಬೈಲ್ ಸಹ ಆಕೆಯ ಬಳಿಯೇ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈಕೆಯೇ ಪೀಡಿತಳ ಮಲತಾಯಿಯನ್ನು ಪ್ರಕರಣದ ಮೊದಲ ಆರೋಪಿ ಮಾಜಿ ಶಿಕ್ಷಣ ಮಂತ್ರಿ ಆಚನಾಸಿಯೋ ಮಾನ್ಸೆರಾಟ್ಟೆ ಅವರಿಗೆ ಪರಿಚಯಿಸಿದ್ದಳು ಎಂದು ಹೇಳಲಾಗುತ್ತಿದೆ.
ಕಳೆದ ಕೆಲ ದಿನಗಳ ಹಿಂದೆ ಶಾಸಕ ನೇಪಾಳದ ಅಪ್ರಾಪ್ತ ಬಾಲಕಿಯನ್ನು 50 ಲಕ್ಷ ರೂಪಾಯಿಗೆ ಆಕೆಯ ಮಲತಾಯಿಯಿಂದ ಖರೀದಿಸಿ ತಂದು ಮನೆಗೆಲಸದಳಾಗಿ ನೇಮಿಸಿಕೊಂಡಿದ್ದರು. ಮಾರ್ಚ್ ತಿಂಗಳಲ್ಲಿ ಅವರು ಪಾನೀಯಕ್ಕೆ ಮದ್ದನ್ನು ಬೆರೆಸಿ ಬಾಲಕಿಗೆ ಕುಡಿಸಿ ಜ್ಞಾನತಪ್ಪಿದ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ದೂರು ದಾಖಲಾಗಿದೆ.
ಬೆಳಿಗ್ಗೆ ಎಚ್ಚರವಾದಾಗ ಮೈಮೇಲೆ ಬಟ್ಟೆ ಇರಲಿಲ್ಲ. ಸುತ್ತಲೂ ರಕ್ತ ಚೆಲ್ಲಾಡಿತ್ತು. ಅವರು ಕೂಡ ಮೈಮೇಲೆ ಯಾವುದೇ ಬಟ್ಟೆಯಿಲ್ಲದೇ ನಗ್ನರಾಗಿದ್ದರು ಎಂದು ಬಾಲಕಿ ಮಕ್ಕಳ ರಕ್ಷಣಾ ಸಮಿತಿಗೆ ಹೇಳಿಕೆ ನೀಡಿದ್ದಳು.
ಮಾರ್ಚ್ ತಿಂಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಆಕೆಯ ಮೇಲೆ ಅತ್ಯಾಚಾರವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶಾಸಕನ ವಿರುದ್ಧ ಐಪಿಸಿ ಸೆಕ್ಷನ್ 375ರ ಪ್ರಕಾರ ಎಫ್ಐಆರ್ ದಾಖಲಾಗಿದೆ.
ಆಚನಾಸಿಯೋ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಅವರ ಮೇಲೆ ಅತ್ಯಾಚಾರ ಮತ್ತು ಮಾನವ ಸಾಗಾಣಿಕೆ ಪ್ರಕರಣವನ್ನು ದಾಖಲಿಸಲಾಗಿದೆ. ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿರುವ ಅವರು ಇದು ನನ್ನ ವಿರುದ್ಧ ನಡೆದ ರಾಜಕೀಯ ಪಿತೂರಿ ಎಂದು ಹೇಳಿದ್ದಾರೆ. ನನ್ನ ಮಾಲೀಕತ್ವದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆ 4,000 ರೂಪಾಯಿ ಕದ್ದಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದೆ. ಇದೇ ಕಾರಣಕ್ಕೆ ಆಕೆ ನನ್ನ ಮೇಲೆ ಸುಳ್ಳು ಆರೋಪವನ್ನು ಹೊರಿಸಿದ್ದಾಳೆ ಎಂದು ಆರೋಪಿ ಶಾಸಕ ದೂರಿದ್ದಾರೆ.
ಬಾಬುಷ್ ಮಗ ರೋಹಿತ್ ಕೂಡ 5 ವರ್ಷಗಳ ಹಿಂದೆ ಅಪ್ರಾಪ್ತ ಜರ್ಮನ್ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಬಂಧಿತನಾಗಿದ್ದ. ನಂತರ ದೋಷಮುಕ್ತನಾಗಿ ಬಿಡುಗಡೆಯಾಗಿದ್ದ.