ಒಂದು ಕಡೆ 'ಬೇಟಿ ಬಚಾವೋ ಬೇಟಿ ಪಡಾವೋ' ನಂತಹ ಯೋಜನೆಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಕಳಪೆ ಸ್ಥಿತಿಯಲ್ಲಿರುವ ಗಂಡು-ಹೆಣ್ಣು ಅನುಪಾತವನ್ನು ಉತ್ತಮಪಡಿಸಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದು ಕಡೆ ಅವರ ಈ ಕನಸಿಗೆ ತಣ್ಣೀರೆರಚುವಂತಹ ಚಟುವಟಿಕೆಗಳು ಅವ್ಯಾಹತವಾಗಿ ಸಾಗುತ್ತಿವೆ. ಅದರಲ್ಲಿ ಮುಖ್ಯವಾಗಿ ಕಾನೂನು ಬಾಹಿರವಾಗಿ ಭ್ರೂಣ ಲಿಂಗ ಪತ್ತೆ ವ್ಯಾಪಕವಾಗಿ ನಡೆಯುತ್ತಿದೆ.
ಇತ್ತೀಚಿಗೆ ಬಿಕಾನೇರ್‌ನ ಪೊಲೀಸರು ಆಗ್ರಾದಲ್ಲಿನ ಒಂದು ಅಲ್ಟ್ರಾಸೌಂಡ್ ಸೆಂಟರ್‌ಗೆ ದಾಳಿ ನಡೆಸಿದ್ದು, ಹಿರಿಯ ರೇಡಿಯೊಲಾಜಿಸ್ಟ್ ಡಾಕ್ಟರ್ ಅಮಿತ್ ಕುಮಾರ್ ಈ ಕೇಂದ್ರವನ್ನು ನಡೆಸುತ್ತಿದ್ದು ಅವರು ಲಿಂಗ ಪತ್ತೆ ಪರೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಇಲ್ಲಿ ದೂರದೂರದಿಂದ ಗರ್ಭಿಣಿಯರನ್ನು ಕರೆ ತಂದು ಲಿಂಗ ಪತ್ತೆ ಪರೀಕ್ಷೆಯನ್ನು ಮಾಡಿಸಲಾಗುತ್ತಿದ್ದು ಅದಕ್ಕೆ ಅಮಿತ್ ಕುಮಾರ್ ದುಬಾರಿ ಶುಲ್ಕವನ್ನು ಸಹ ವಿಧಿಸುತ್ತಾರೆ ಎಂದು ವಿಚಾರಣೆಯಿಂದ ತಿಳಿದು ಬಂದಿದೆ.
ಭ್ರೂಣ ಹೆಣ್ಣಾದರೆ ಲಕ್ಷ್ಮಿ, ಗಂಡಾದರೆ ಗಣೇಶ ಎಂದು ವೈದ್ಯ ಅಮಿತ್ ಕುಮಾರ್ ಕೋಡ್ ವರ್ಡ್ ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಏಜೆಂಟರು ಇಲ್ಲಿಗೆ ಗರ್ಭಿಣಿಯರನ್ನು ಕರೆತರುತ್ತಿದ್ದರು. ಅವರಿಗೆ ಸಿಗುವ ಕಮಿಷನ್ 7,000 ದಿಂದ 10,000 ಎಂಬ ಮಾಹಿತಿ ಲಭಿಸಿದೆ. ಕಮಿಷನ್ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಿಗುತ್ತಿತ್ತೆಂದರೆ ವೈದ್ಯ ಅಮಿತ್ ಕುಮಾರ್ ತನ್ನಲ್ಲಿಗೆ ಬರುವ ಗರ್ಭಿಣಿ ಮಹಿಳೆಯರ ಸಂಬಂಧಿಕರಿಂದ ಎಷ್ಟು ಹಣ ಸುಲಿಯುತ್ತಿರಬಹುದು ಎಂಬುದು ಪೊಲೀಸರಿಗೆನೆ ಶಾಕ್ ತಂದಿದೆ.
ವೈದ್ಯ ಅಮಿತ್ ಕುಮಾರ್ ಭ್ರೂಣ ಲಿಂಗ ಪತ್ತೆ ರಾಕೆಟ್‌ನಲ್ಲಿ ತೊಡಗಿಕೊಂಡಿರುವ ವಿಷಯ ತಿಳಿದು ಭಾರತೀಯ ಮೆಡಿಕಲ್ ಅಸೋಸಿಯೇಶನ್ (ಇಮಾ) ಆಘಾತ ಮತ್ತು ಕಳವಳ ವ್ಯಕ್ತಪಡಿಸಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.