Publish Date: Wed, 17 Nov 2021 (09:22 IST)
Updated Date: Wed, 17 Nov 2021 (09:25 IST)
ಮಗಳು ಬೇರೆ ಜಾತಿಯವನನ್ನು ಮದುವೆಯಾದಳು ಎಂಬ ಕೋಪದಿಂದ ತಂದೆ ಆಕೆಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿದ ಹೀನ ಘಟನೆ ಮಧ್ಯಪ್ರದೇಶದ ರಾಟಿಬಾದ್ನಲ್ಲಿ ನಡೆದಿದೆ.
ಆ ಮಹಿಳೆಗೆ 8 ತಿಂಗಳ ಮಗು ಕೂಡ ಇತ್ತು. ಆದರೆ ಆ ಮಗು ಇತ್ತೀಚೆಗಷ್ಟೇ ಅನಾರೋಗ್ಯದಿಂದ ಮೃತಪಟ್ಟಿತ್ತು. ಘಟನೆ ಬಗ್ಗೆ ಕುಟುಂಬದವರು ಮಾಹಿತಿ ನೀಡಿದ ಪ್ರಕಾರ, ಮೃತ ಮಗುವಿನ ಅಂತ್ಯಕ್ರಿಯೆಗಾಗಿ ಮಗಳನ್ನು ಕಾಡಿನ ಸಮೀಪ ಕರೆದುಕೊಂಡು ಹೋದ ಅಪ್ಪ, ಅಲ್ಲಿಯೇ ಆಕೆಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆಯನ್ನು ವಿವರಿಸಿರುವ ರಾಟಿಬಾದ್ ಠಾಣೆ ಅಧಿಕಾರಿ ಸುದೇಶ್ ತಿವಾರಿ, ಈಗೆರಡು ದಿನಗಳ ಹಿಂದೆ ಸಂಸಗಡ್ ಅರಣ್ಯ ಪ್ರದೇಶದಲ್ಲಿ ತಾಯಿ ಮತ್ತು ಮಗುವಿನ ಮೃತದೇಹ ಸಿಕ್ಕಿದೆ. ಅದು ಪತ್ತೆಯಾದ ನಂತರ ತನಿಖೆ ಶುರು ಮಾಡಲಾಯಿತು. ನಂತರ ಆ ಮಹಿಳೆ ಸೆಹೋರ್ ಜಿಲ್ಲೆಯ ಬಿಲ್ಕಿಸ್ಗಂಜ್ನವರು ಎಂಬುದು ಗೊತ್ತಾಯಿತು. ನಂತರ ಅವರ ಕುಟುಂಬದವರನ್ನೆಲ್ಲ ವಿಚಾರಣೆ ಮಾಡಿದ ಸತ್ಯ ಬೆಳಕಿಗೆ ಬಂತು. ಆಕೆ ಬೇರೆ ಜಾತಿಯವನೊಬ್ಬನನ್ನು ಪ್ರೀತಿಸಿದ್ದಳು. ಆದರೆ ಆತನೊಂದಿಗೆ ಮದುವೆ ಮಾಡಿಕೊಡಲು ಆಕೆಯ ಪಾಲಕರಿಗೆ, ಅದರಲ್ಲೂ ಕೂಡ ತಂದೆಗೆ ಸುತಾರಾಂ ಇಷ್ಟವಿರಲಿಲ್ಲ. ಆದರೆ ನಂತರ ಆಕೆ ಓಡಿಹೋಗಿ ಮದುವೆಯಾದಳು. ಇಷ್ಟು ದಿನಗಳಲ್ಲಿ ಒಮ್ಮೆಯೂ ಮಹಿಳೆ ತನ್ನ ತವರು ಮನೆಗೆ ಬಂದಿರಲಿಲ್ಲ. ಮಗುವಿನ ಅಂತ್ಯಕ್ರಿಯೆಗೆಂದು ಮಗಳನ್ನೂ ಕರೆದುಕೊಂಡು ಅರಣ್ಯಕ್ಕೆ ಹೋಗಿದ್ದ. ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿ, ಹತ್ಯೆ ಮಾಡಿದ್ದಾನೆ. ಎಲ್ಲ ರೀತಿಯ ವಿಚಾರಣೆಯ ಬಳಿಕ 55ವರ್ಷದ ವ್ಯಕ್ತಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಪೊಲೀಸರ ವಶದಲ್ಲಿಯೇ ಇದ್ದಾನೆ.