Publish Date: Wed, 26 Aug 2026 (17:27 IST)
Updated Date: Wed, 26 Aug 2026 (17:33 IST)
ನೇಪಾಳದ ರಾಸುವಾ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಹಠಾತ್ ಪ್ರವಾಹದ ನಂತರ ನಾಪತ್ತೆಯಾದ 291 ವಿದೇಶಿ ಪ್ರಜೆಗಳಲ್ಲಿ ಕನಿಷ್ಠ 105 ಭಾರತೀಯ ಪ್ರವಾಸಿಗರು ಸೇರಿದ್ದಾರೆ ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿ ತಿಳಿಸಿದೆ.
ನಾಪತ್ತೆಯಾದ ವಿದೇಶಿ ಪ್ರಜೆಗಳಲ್ಲಿ ಅಮೆರಿಕದ ಮೂವರು, ಮಲೇಷ್ಯಾದ 17, ಯುಕೆ (ಬ್ರಿಟನ್)ನ 12, ದಕ್ಷಿಣ ಆಫ್ರಿಕಾದ ನಾಲ್ವರು, ಆಸ್ಟ್ರೇಲಿಯಾದ ಒಬ್ಬರು ಮತ್ತು ನೆದರ್‌ಲ್ಯಾಂಡ್ಸ್‌ನ ಒಬ್ಬರು ಸೇರಿದ್ದಾರೆ. ಇತರ 103 ಮಂದಿಯ ರಾಷ್ಟ್ರೀಯತೆ ಇನ್ನೂ ಖಚಿತವಾಗಬೇಕಿದೆ.
ಟಿಬೆಟ್‌ನ ಗಡಿಯಲ್ಲಿರುವ ನೇಪಾಳದ ಎರಡು ಮಧ್ಯ ಜಿಲ್ಲೆಗಳಲ್ಲಿ ಸಂಭವಿಸಿದ ಹಠಾತ್ ಮತ್ತು ಭಾರಿ ಪ್ರವಾಹವು ಎಂಟು ಮಂದಿಯ ಸಾವಿಗೆ ಕಾರಣವಾಯಿತು.
ಅಲ್ಲದೆ, ನದಿಯ ದಡದಲ್ಲಿರುವ ವಸತಿ ಪ್ರದೇಶಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿತು ಮತ್ತು ಕನಿಷ್ಠ ಒಂದು ಡಜನ್ ಜಲವಿದ್ಯುತ್ ಯೋಜನೆಗಳಿಗೆ ಹಾನಿ ಮಾಡಿತು.
ಸ್ಥಳೀಯ ಸಮಯದ ಪ್ರಕಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಟಿಬೆಟ್ ಕಡೆಯಿಂದ ಭೋಟೆ ಕೋಶಿ ನದಿಯಲ್ಲಿ ಪ್ರವಾಹವು ರಭಸದಿಂದ ನುಗ್ಗಿಬಂದಿತು.
ಇದು ಟಿಬೆಟ್ ಗಡಿಯಲ್ಲಿರುವ ರಾಸುವಾ ಮತ್ತು ಧಾಡಿಂಗ್ ಜಿಲ್ಲೆಗಳ ಮೇಲೆ ಹಾಗೂ ಕಠ್ಮಂಡುವಿನ ನೈಋತ್ಯದಲ್ಲಿರುವ ನುವಾಕೋಟ್ ಜಿಲ್ಲೆಯ ಮೇಲೆ ಪರಿಣಾಮ ಬೀರಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ, ಆದಷ್ಟು ಬೇಗ ನೇಪಾಳಕ್ಕೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಭಾರತ ಸಿದ್ಧತೆ ನಡೆಸುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ರಾಸುವಾದಲ್ಲಿನ ಸ್ಥಳೀಯ ಮಳೆಯಿಂದಾಗಿ ಈ ಪ್ರವಾಹ ಉಂಟಾಗಿಲ್ಲ; ಬದಲಿಗೆ ಟಿಬೆಟ್ ಭಾಗದಲ್ಲಿ ಸುರಿದ ಭಾರಿ ಮಳೆ ಅಥವಾ ಹಿಮಪಾತದಿಂದಾಗಿ ಇದು ಸಂಭವಿಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ನಿಖರವಾದ ಕಾರಣವನ್ನು ಇನ್ನೂ ಖಚಿತಪಡಿಸಿಕೊಳ್ಳಬೇಕಿದೆ.
ಜಲವಿಜ್ಞಾನ ಮತ್ತು ಹವಾಮಾನ ಇಲಾಖೆಯ ಪ್ರಕಾರ, ಬುಧವಾರದ ಪ್ರವಾಹವು ರಾಸುವಾದಲ್ಲಿನ ಮಳೆಯಿಂದ ಉಂಟಾಗಿಲ್ಲ.
ರಾಸುವಾದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈ ಪ್ರವಾಹ ಉಂಟಾದಂತೆ ಕಂಡುಬರುತ್ತಿಲ್ಲ ಎಂದು ಜಲವಿಜ್ಞಾನ ಮತ್ತು ಹವಾಮಾನ ಇಲಾಖೆಯ ಮಾಹಿತಿ ಅಧಿಕಾರಿ ದಿನಕರ್ ಕಾಯಸ್ಥ ತಿಳಿಸಿದ್ದಾರೆ.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ