ಶಿಮ್ಲಾ: ಆರ್ಥಿಕ ಸಂಕಷ್ಟಕ್ಕೊಳಗಾದ ಹಿನ್ನಲೆಯಲ್ಲಿ ಹಿಮಾಚಲ ಸರ್ಕಾರ ಜನರಿಗೆ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ವಾಪಸಾತಿ ಮಾಡುವ ಅಭಿಯಾನ ಶುರು ಮಾಡಿದೆ.
ಆರ್ಥಿಕ ಸಂಕಷ್ಟದಲ್ಲಿರುವ ಹಿಮಾಚಲ ಸರ್ಕಾರ ಈಗ ಹಣ ಉಳಿಸುವ ಕೆಲಸಕ್ಕೆ ಮುಂದಾಗಿದೆ. ಅದರಂತೆ ಅನಿವಾರ್ಯವಾಗಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ವಿದ್ಯುತ್ ಸಬ್ಸಿಡಿ ಯೋಜನೆಯನ್ನು ಹಿಂಪಡೆಯಲು ತೀರ್ಮಾನಿಸಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಸಖು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಸ್ವತಃ ಜನರೇ ಗ್ಯಾರಂಟಿಯನ್ನು ವಾಪಸ್ ಮಾಡುವ ಅಭಿಯಾನದಲ್ಲಿ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ. ಅದರಂತೆ ತಾವೇ ಮೊದಲನೆಯವರಾಗಿ ತಮ್ಮ ಹೆಸರಿನಲ್ಲಿ ನೋಂದಣಿಯಾಗಿದ್ದ ವಿದ್ಯುತ್ ಸಬ್ಸಿಡಿ ವಾಪಸ್ ನೀಡಿದ್ದಾರೆ. ಜೊತೆಗೆ ಆರ್ಥಿಕವಾಗಿ ಸಶಕ್ತರಾಗಿರುವ ಜನರೂ ಇದೇ ರೀತಿ ಸಬ್ಸಿಡಿ ವಾಪಸಾತಿ ಮಾಡುವಂತೆ ಮನವಿ ಮಾಡಿದ್ದಾರೆ.
ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಬಹು ವಿದ್ಯುತ್ ಸಂಪರ್ಕವಿರುವವರು ವಿದ್ಯುತ್ ಸಬ್ಸಿಡಿ ವಾಪಸಾತಿ ಮಾಡುವಂತೆ ಕೋರಿದ್ದಾರೆ. ಸರ್ಕಾರ ಈಗಾಗಲೇ ವಿದ್ಯುತ್ ಸಬ್ಸಿಡಿಗಾಗಿ 2,200 ಕೋಟಿ ರೂ. ಖರ್ಚು ಮಾಡುತ್ತಿದೆ. ಒಂದು ವೇಳೆ ಸಬ್ಸಿಡಿ ಹಿಂಪಡೆದರೆ ಸಾಕಷ್ಟು ಉಳಿತಾಯವಾಗಲಿದೆ ಎಂಬುದು ಸರ್ಕಾರದ ನಿರ್ಧಾರವಾಗಿದೆ. ಆದರೆ ಇದನ್ನು ಬಿಜೆಪಿ ತೀವ್ರ ಟೀಕೆ ಮಾಡಿದೆ. ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಕಾಂಗ್ರೆಸ್ ನಿಂದ ರಾಜ್ಯಗಳು ಆರ್ಥಿಕವಾಗಿ ದಿವಾಳಿಯಾಗುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಟೀಕೆ ಮಾಡಿದೆ.