ಮದುವೆ ಮಾಡಿಸಿಲ್ಲವೆಂದು ಕೋಪಗೊಂಡು ಕಾಯಿಲೆಯಿಂದ ಬಳಲುತ್ತಿದ್ದ ತಾಯಿಯನ್ನು ಮಗನೇ ಜೀವಂತವಾಗಿ ದಹಿಸಿದ ಅಮಾನವೀಯ ಘಟನೆ ತಮಿಳುನಾಡಿನ ಅರುಮ್‌ಬಾಕಮ್‌ನಲ್ಲಿ ಭಾನುವಾರ ನಡೆದಿದೆ.
ಮೃತಳನ್ನು 63 ವರ್ಷದ ಡಿ. ಶಶಿಕಲಾ ಎಂದು ಗುರುತಿಸಲಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಆರೋಪಿ ಡಿ. ಅಮರನಾಥ್ ಪ್ರಸಾದ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಕುಡಿದ ಮತ್ತಿನಲ್ಲಿದ್ದ ಆತ ತಾಯಿಯನ್ನು ಕುರ್ಚಿಗೆ ಕಟ್ಟಿ ಬೆಂಕಿ ಹಚ್ಚಿದ್ದಾನೆ. ತನ್ನ ತಪ್ಪಾತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ತನ್ನ ಅನಾರೋಗ್ಯ ಪೀಡಿತ ತಾಯಿಯ ಜತೆಯಲ್ಲಿ ಅರುಮ್‌ಬಾಕಮ್‌ನ ಮಂಗಲಾ ನಗರದಲ್ಲಿ ಹುಲ್ಲಿನ ಛಾವಣಿಯ ಮನೆಯಲ್ಲಿ ವಾಸಿಸುತ್ತಿದ್ದ. ಆತ ವಿಪರೀತ ಕುಡಿಯುತ್ತಿದ್ದು ತನೆ ಮದುವೆ ಮಾಡಿಸಿಲ್ಲವೆಂದು ತಾಯಿಯ ಬಳಿ ಸದಾ ಜಗಳವಾಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದ ಆಕೆಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಸದಾ ಕುರ್ಚಿಯಲ್ಲಿಯೇ ಕುಳಿತಿರುತ್ತಿದ್ದಳು. ಶನಿವಾರ ರಾತ್ರಿ ಕೆಲಸದಿಂದ ಮರಳಿದ ಅಮರನಾಥ್ ತಾಯಿಯ ಜತೆ ಜಗಳವಾಡಲು ಪ್ರಾರಂಭಿಸಿದ್ದಾನೆ. ಮಧ್ಯ ಪ್ರವೇಶಿಸಿದ ನೆರೆಹೊರೆಯವರು ಜಗಳವನ್ನು ನಿಲ್ಲಿಸಿ ವಾಪಸ್ಸಾಗಿದ್ದಾರೆ.
ಆದರೆ ರವಿವಾರ ಮುಂಜಾನೆ 5 ಗಂಟೆ ಸುಮಾರಿ ಆಕೆಯನ್ನು ಕುರ್ಚಿಗೆ ಕಟ್ಟಿದ ಆತ ಬೆಂಕಿ ಹಚ್ಚಿದ್ದಾನೆ. ನೆರೆಹೊರೆಯವರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದರಾದರೂ ಸಂಜೆ ಆಕೆ ಕೊನೆಯುಸಿರೆಳೆದಿದ್ದಾಳೆ.