ಕೋಲ್ಕತ್ತಾ : ಡ್ರೈವಿಂಗ್ ಕಲಿಯುತ್ತಿದ್ದ ಮಾಜಿ ಪೊಲೀಸ್ ಅಧಿಕಾರಿಯೊಬ್ಬ ಚಾಲನೆಯ ಸಮಯದಲ್ಲಿ ವ್ಯಕ್ತಿಯೊಬ್ಬರ ಮೇಲೆ ಗಾಡಿಯನ್ನು ಹರಿಸಿದ್ದು, ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಸೋಮವಾರ ಕೋಲ್ಕತ್ತಾದ ಗರಿಯಾ ಸಹಕಾರಿ ರಸ್ತೆಯಲ್ಲಿ ಬೆಳಗ್ಗೆ 9 ಗಂಟೆಯ ಹೊತ್ತಿಗೆ ನಡೆದಿದೆ. ಮೃತ ದುರ್ದೈವಿ ಪ್ರೊಫೆಸರ್ ಸುನಿಲ್ ಕುಮಾರ್ ಗರೈ ಮಾರುಕಟ್ಟೆಯಿಂದ ತರಕಾರಿಯನ್ನು ತರಲು ಹೋಗಿದ್ದು, ಮರಳುವಾಗ ದುರ್ಘಟನೆ ನಡೆದಿದೆ.
ವರದಿಗಳ ಪ್ರಕಾರ ಗರೈ ತಮ್ಮ ಬೈಕಿನಲ್ಲಿ ಮನೆಗೆ ತೆರಳುತ್ತಿದಾಗ ಹಿಂದಿನಿಂದ ಬಂದ ಕಾರು, ಬೈಕ್ಗೆ ಡಿಕ್ಕಿ ಹೊಡೆದಿದೆ. ರಸ್ತೆಯ ಮೇಲೆ ಬಿದ್ದ ಮೇಲೆ ಕಾರು ಅವರ ಮೇಲೆಯೇ ಹರಿದುಕೊಂಡು ಹೋಗಿದೆ.
ಗರೈಗೆ ಡಿಕ್ಕಿ ಹೊಡೆದ ಕಾರು ಮಧ್ಯಮ ಹಂತದ ಮಾಜಿ ಪೊಲೀಸ್ ಅಧಿಕಾರಿ ಓಡಿಸುತ್ತಿದ್ದು, ಅಪಘಾತದ ಸಮಯದಲ್ಲಿ ಕಾರು ಚಾಲನೆಯನ್ನು ಕಲಿಯುತ್ತಿದ್ದರು ಎನ್ನಲಾಗಿದೆ. ಗರೈ ಅವರ ಬೈಕ್ ಎದುರುಗಡೆ ಇದ್ದುದನ್ನು ಕಂಡು ಗಾಬರಿಗೊಳಗಾದ ಆರೋಪಿ ಗೊಂದಲದಲ್ಲಿ ಬ್ರೇಕ್ ಹಾಕುವ ಬದಲು ಆಕ್ಸಿಲೆಟರ್ ಒತ್ತಿದ್ದು, ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.