ನವದೆಹಲಿ: ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ವಿವಿಧೆಡೆ 11 ಮಕ್ಕಳ ಸಾವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸರ್ಕಾರದ ಪಟ್ಟಿಯಲ್ಲಿಲ್ಲದಿದ್ದರೂ ರೋಗಿಗಳಿಗೆ ಔಷಧಿ ಬರೆದುಕೊಡುತ್ತಿದ್ದ ಓರ್ವ ವೈದ್ಯನನ್ನು ಅರೆಸ್ಟ್ ಮಾಡಲಾಗಿದೆ.
ದೇಶದಾದ್ಯಂತ ಸಾವಿಗೀಡಾದ ಒಟ್ಟು 11 ಮಕ್ಕಳ ಪೈಕಿ ಬಹುತೇಕ ಮಕ್ಕಳು ಪರಾಸಿಯಾದ ಮಕ್ಕಳ ತಜ್ಞ ಡಾ ಪ್ರವೀಣ್ ಸೋನಿ ಬಳಿ ಚಿಕಿತ್ಸೆ ಪಡೆದವರು. ಕೋಲ್ಡ್ರಿಫ್ ಸಿರಪ್ ಸುರಕ್ಷಿತ ಔಷಧಿಗಳು ಎಂದು ಸರ್ಕಾರ ಮಾಡಿರುವ ಪಟ್ಟಿಯಲ್ಲಿಲ್ಲ. ಹಾಗಿದ್ದರೂ ಈತ ಮಕ್ಕಳಿಗೆ ಕೆಮ್ಮಿನ ರೋಗಕ್ಕೆ ಈ ಔಷಧಿ ನೀಡಲು ಸೂಚಿಸುತ್ತಿದ್ದ.
ಈ ಕಾರಣಕ್ಕೆ ಈತನನ್ನು ಬಂಧಿಸಲಾಗಿದೆ. ಅಲ್ಲದೆ, ಕೋಲ್ಡ್ರಿಫ್ ಔಷಧಿ ತಯಾರಿಸುತ್ತಿದ್ದ ತಮಿಳುನಾಡಿನ ಕಾಂಚಿಪುರಂನಲ್ಲಿರುವ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿ ವಿರುದ್ಧವೂ ಮಧ್ಯಪ್ರದೇಶ ಸರ್ಕಾರ ಕೇಸ್ ದಾಖಲಿಸಿದೆ. ಈ ಔಷಧಿಗಳಲ್ಲಿ 48.6% ಡ್ರೈಥಿಲೀನ್ ಗ್ಲೈಕೋಲ್ ಇದೆ ಎಂದು ಪತ್ತೆಯಾಗಿದೆ. ಇದು ಅತ್ಯಂತ ವಿಷಕಾರಿಯಾಗಿದ್ದು ಇದುವೇ ಮಕ್ಕಳ ಜೀವಕ್ಕೆ ಎರವಾಗಿರಬಹುದು ಎನ್ನಲಾಗಿದೆ. ಒಂದು ಸಂಸ್ಥೆಯ ಮತ್ತು ವೈದ್ಯರ ನಿರ್ಲ್ಯಕ್ಷದಿಂದ ಈಗಷ್ಟೇ ಪ್ರಪಂಚಕ್ಕೆ ಕಾಲಿಟ್ಟ ಮಕ್ಕಳು ಕಣ್ಣು ಮುಚ್ಚುವಂತಾಗಿದೆ.