ನವದೆಹಲಿ : ಮರಣದಂಡನೆ ಶಿಕ್ಷೆಯನ್ನು ಜಾರಿಗೆ ತರಲು ನೇಣು ಹಾಕುವ ಮರಣವು ಅತ್ಯಂತ ಸೂಕ್ತವಾದ ಮತ್ತು ನೋವುರಹಿತ ವಿಧಾನವೇ ಎಂಬುದನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ಇಂದು ಈ ಬಗ್ಗೆ ವಿಚಾರಣೆ ನಡೆಸಿದ ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಪೀಠ, ನೇಣು ಹಾಕುವ ಮೂಲಕ ಹೊಂದುವ ಮರಣದ ಸಮಯದಲ್ಲಿ ಉಂಟಾಗುವ ಪರಿಣಾಮ ಮತ್ತು ನೋವಿನ ಬಗ್ಗೆ ಯಾವುದೇ ಡೇಟಾ ಅಥವಾ ಅಧ್ಯಯನವನ್ನು ಕೈಗೊಳ್ಳಲಾಗಿದೆಯೇ ಎಂಬುದರ ವಿವರಗಳನ್ನು ನೀಡುವಂತೆ ಕೇಳಿದೆ.
ನೇಣು ಹಾಕುವಿಕೆಯಿಂದ ಉಂಟಾಗುವ ಸಾವಿನ ಪರಿಣಾಮ, ನೋವು ಉಂಟಾದಾಗ ಸಾವು ಸಂಭವಿಸಲು ತೆಗೆದುಕೊಂಡ ಅವಧಿ, ನೇಣು ಹಾಕುವಿಕೆಯನ್ನು ಜಾರಿಗೆ ತರಲು ಸಂಪನ್ಮೂಲಗಳ ಲಭ್ಯತೆಯ ಬಗ್ಗೆ ಮಾಹಿತಿ ನೀಡಬೇಕು. ಇದರ ಜೊತೆಗೆ ಇಂದಿನ ವಿಜ್ಞಾನದಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯಲು ಇದಕ್ಕಿಂತ ಸೂಕ್ತವಾದ ಇನ್ನೊಂದು ವಿಧಾನವಿದೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಕೇಳಿದೆ.
ಒಂದು ವೇಳೆ ಸರ್ಕಾರ ಅಂತಹ ಅಧ್ಯಯನವನ್ನು ಕೈಗೊಳ್ಳದಿದ್ದರೆ ಅದರ ಬಗ್ಗೆ ಅಧ್ಯಯನ ನಡೆಸಲು ಸರ್ಕಾರ ಸಮಿತಿಯನ್ನು ರಚಿಸಬಹುದು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಕೇಂದ್ರವು ಈ ಅಧ್ಯಯನವನ್ನು ಮಾಡದಿದ್ದರೆ, ಎನ್ಎಲ್ಯು ದೆಹಲಿ, ಬೆಂಗಳೂರು ಅಥವಾ ಹೈದರಾಬಾದ್ನಂತಹ ಎರಡು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ತಜ್ಞರು, ಎಐಐಎಂಎಸ್ನ ಕೆಲವು ವೈದ್ಯರು, ವೈಜ್ಞಾನಿಕ ತಜ್ಞರಿರುವ ಸಮಿತಿಯನ್ನು ನಾವು ರಚಿಸಬಹುದು ಎಂದು ನ್ಯಾಯಾಲಯ ಹೇಳಿದೆ.